ಅಭಿನಂದನೆ ಸ್ವೀಕರಿಸಿ ಸುಮ್ಮನಿರಬೇಡಿ, ಮುಂದಿನ ಚುನಾವಣೆಗೆ ಸಜ್ಜಾಗೋಣ

0


ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕರೆ

ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ಸುಳ್ಯದಲ್ಲಿ ದಾಖಲೆ ಮತಗಳಿಂದ ನಾವು ಗೆದ್ದಿದ್ದೇವೆ. ಈ ಗೆಲುವಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಪಕ್ಷ ಅಭಿನಂದನೆ ಸಲ್ಲಿಸುತ್ತದೆ. ಆದರೆ ಅಭಿನಂದನೆ ಸ್ವೀಕರಿಸಿ ನಾವು ಹಾಗೇ ಇರುವುದಲ್ಲ. ಮುಂದೆ ಬರುವ ಲೋಕಸಭಾ ಚುನಾವಣೆಯ ಗೆಲುವಿಗಾಗಿ ಸಜ್ಜಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕರೆ ನೀಡಿದ್ದಾರೆ.


ವಿಧಾನಸಭಾ ಚುನಾವಣೆಯಲ್ಲಿ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯರ ಗೆಲುವಿಗೆ ಶ್ರಮ ವಹಿಸಿದ ಕಾರ್ಯಕರ್ತರಿಗೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯದ ಬಂಟರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಜನತೆಯ ತೀರ್ಪುನ್ನು ಪ್ರಜಾಪ್ರಭುತ್ವದಲ್ಲಿ ನಾವು ಗೌರವಿಸುತ್ತೇವೆ. ನಮಗಾದ ಹಿನ್ನಡೆಯ ಕುರಿತು ವಿಮರ್ಶೆ ಮಾಡಿಕೊಂಡು ಆತ್ಮಾವಲೋಕನ ಮಾಡುತ್ತೇವೆ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯೋಣ ಎಂದು ಅವರು ಕಾರ್ಯಕರ್ತರಿಗೆ ಹೇಳಿದರು.


ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ ಮಾತನಾಡಿ ಸುಳ್ಯ ಬಿಜೆಪಿಯ ಸಂಘಟನಾ ಕೇಂದ್ರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದೀರಿ. ಈ ಕ್ಷೇತ್ರವನ್ನು ಆರು ಬಾರಿ ಶಾಸಕರಾಗಿ ಪ್ರತಿನಿಧಿಸಿರುವ ಅಂಗಾರರ ಅಭಿವೃದ್ಧಿ ಕಾರ್ಯ, ಸರಳ ಸಜ್ಜನಿಕೆಯೂ ಭಾಗೀರಥಿಯವರ ಗೆಲುವಿಗೆ ಕಾರಣವಾಗಿದೆ. ಜತೆಗೆ ಕಾರ್ಯಕರ್ತರ ಶ್ರಮವೂ ಇದೆ. ಇಂದು ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿರಬಹುದು. ಅದು ಕ್ಷಣಿಕ. ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ” ಎಂದು ಹೇಳಿದರು.


ಶಾಸಕಿ ಭಾಗೀರಥಿ ಮುರುಳ್ಯರನ್ನು ಪಕ್ಷದ ವತಿಯಿಂದ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು ಇದು ನನ್ನ ಗೆಲುವಲ್ಲ. ಕಾರ್ಯಕರ್ತರ ಗೆಲುವು. ಸಚಿವರಾಗಿದ್ದ ಅಂಗಾರರ ಅಭಿವೃದ್ಧಿಯ ಗೆಲುವು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ಎಲ್ಲರೂ ಸಹಕಾರ ನೀಡಬೇಕು. ನನ್ನಿಂದ ತಪ್ಪುಗಳಾದರೆ ನನಗೇ ತಿಳಿಸಿ ತಿದ್ದಿಕೊಂಡು ಮುನ್ನಡೆಯುತ್ತೇನೆ ಎಂದು ಹೇಳಿದರು.


ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಮತಿ ಆಶಾ ತಿಮ್ಮಪ್ಪ ಗೌಡರನ್ನು ಗೌರವಿಸಲಾಯಿತು.
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಬಿಜೆಪಿ ಸರ್ವ ಸಾಮಾನ್ಯರ ಪಾರ್ಟಿ ಎನ್ನುವುದು ಭಾಗೀರಥಿಯವರ ಗೆಲುವಿನಿಂದ ಸಾಬೀತಾಗಿದೆ” ಎಂದು ಹೇಳಿದರು.


ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರಕಾರದ ಜನಪರ ಯೋಜನೆ ಮತ್ತು ಅಂಗಾರರ ಅಭಿವೃದ್ಧಿ ಕಾರ್ಯದಿಂದ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗೆ ಜನ ಮತ ಹಾಕಿದ್ದರೆ ಸುಳ್ಯದ ಜನತೆ ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳನ್ನು ನಂಬದೇ ಹಿಂದುತ್ವವನ್ನು ನಂಬಿ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.


ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪದಾಧಿಕಾರಿಗಳಾದ ರಾಮದಾಸ್ ಬಂಟ್ವಾಳ್, ಕಸ್ತೂರಿ ಪಂಜ, ವೆಂಕಟ್ ವಳಲಂಬೆ, ಬೂಡಿಯಾರ್ ರಾಧಾಕೃಷ್ಣ ರೈ, ಸುಳ್ಯ ಮಂಡಲ ಮಾಜಿ ಅಧ್ಯಕ್ಷರುಗಳಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ರಬ್ಬರ್ ಬೋರ್ಡ್ ನಿರ್ದೇಶಕ ಮುಳಿಯ ಕೇಶವ ಭಟ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ವೇದಿಕೆಯಲ್ಲಿದ್ದರು.


ಬಿಜೆಪಿ ಮಂಡಲ ಸಮಿತಿ ವತಿಯಿಂದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರ ಪರವಾಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರನ್ನು ಸನ್ಮಾನಿಸಿದರು.


ಸುಳ್ಯ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಂದೇ ಮಾತರಂ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.


ಸಮಾರಂಭದಲ್ಲಿ ಮಹಿಳಾ ಮೋರ್ಚಾ ವತಿಯಿಂದ ಶಾಸಕಿ ಭಾಗಿರಥಿ ಮುರುಳ್ಯರನ್ನು ಸನ್ಮಾನಿಸಲಾಯಿತು. ಸಭೆಯ ಕೊನೆಯಲ್ಲಿ ಕಾರ್ಯಕರ್ತರಿಂದ ಭಾಗೀರಥಿಯವರಿಗೆ ಗೌರವ ನಡೆಯಿತು.