ಬೆಂಬಲಿಗರ ದುರ್ವರ್ತನೆಗೆ ಪುತ್ತೂರು ಶಾಸಕರ ಬೆಂಬಲ : ಸುಳ್ಯ ಬಿಜೆಪಿ ಖಂಡನೆ

0

ಪುತ್ತೂರು ಶಾಸಕರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಯದ ಯುವಕನೊಬ್ಬ ಬರೆದಿದ್ದಾರೆನ್ನಲಾದ ಆಕ್ಷೇಪಾರ್ಹ ಬರಹದ ಕುರಿತಂತೆ ಅವರ ಬೆಂಬಲಿಗರೆನ್ನಲಾದ ಕೆಲವರು ರಾತ್ರಿ ವೇಳೆಯಲ್ಲಿ ಆತನ ಮನೆಗೆ ಬಂದು ಮಹಿಳೆಯರ ಎದುರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯವಾಗಿದ್ದು ಈ ಘಟನೆಯನ್ನು ಪುತ್ತೂರಿನ ಶಾಸಕ ಅಶೋಕ್ ರೈ ಯವರು ಸಮರ್ಥನೆ ಮಾಡಿಕೊಂಡಿರುವುದು ಈ ದೇಶದ ಕಾನೂನು ವ್ಯವಸ್ಥೆಗೆ ಮಾಡಿರುವ ಅವಮಾನವಾಗಿದೆ ಎಂದು ಸುಳ್ಯ ಬಿಜೆಪಿ ಸಮಿತಿ ಮಂಡಲ ಸಮಿತಿ ಹೇಳಿದೆ.

ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಟೀಕೆ ಟಿಪ್ಪಣಿಗಳು ಸಹಜ. ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದವರು ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ. ಸುಳ್ಯದ ವ್ಯಕ್ತಿಯು ಯಾವುದೇ ಆಕ್ಷೇಪಾರ್ಹ ಬರಹವನ್ನು ಬರೆದಿದ್ದರೂ ಅದನ್ನು ಪ್ರಶ್ನಿಸಲು ಭಾರತದ ಕಾನೂನು ವ್ಯವಸ್ಥೆ ಯಲ್ಲಿ ಹಲವು ಮಾರ್ಗಗಳಿವೆ. ಅದನ್ನು ಬಿಟ್ಟು ರಾತ್ರಿ ಅವೇಳೆಯಲ್ಲಿ ಯುವಕರು ಗುಂಪುಕಟ್ಟಿಕೊಂಡು ಪಾನಮತ್ತರಾಗಿ ಮನೆಗೆ ನುಗ್ಗಿ ಮಹಿಳೆಯರ ಮುಂದೆ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ನೀನು ಹೀಗೇ ಬರೆಯುತ್ತ ಹೋದರೆ ಒಂದು ದಿನ ಶವವಾಗುತ್ತಿಯ ಎಂದು ಬೆದರಿಸಿರುವುದು ಅವರ ಮನೆಯವರ ಮಾತಿನಿಂದ ಸ್ಪಷ್ಟವಾಗಿದೆ. ಈ ರೀತಿಯ ಗೂಂಡಾಗಿರಿಯು ಅತ್ಯಂತ ಖಂಡನೀಯ. ಪುತ್ತೂರಿನ ಶಾಸಕರು ಇಂತಹ ಘಟನೆಯನ್ನು ಖಂಡಿಸಿ ತನ್ನ ಬೆಂಬಲಿಗರೆನ್ನಲಾದವರಿಗೆ ಬುದ್ದಿ ಹೇಳುವ ಕೆಲಸವನ್ನು ಮಾಡಬೇಕಿತ್ತು. ಅದನ್ನು ಬಿಟ್ಟು ಇಂತಹ ಗೂಂಡಾ ಪ್ರವೃತ್ತಿ ಯನ್ನು ಸಮರ್ಥಿಸಿಕೊಂಡು ಇದನ್ನು ಸಹಜ ಎಂಬಂತೆ ಸ್ವೀಕರಿಸಿರುವುದು ಅವರ ಮಾನಸಿಕತೆಗೆ ಸಾಕ್ಷಿಯಾಗಿದೆ. ಪುತ್ತೂರು ಶಾಸಕರ ಬೆಂಬಲಿಗರೆಲ್ಲರೂ ಗೂಂಡಾ ಗಳೇ ಎಂದು ನಾವು ಪ್ರಶ್ನಿಸಬೇಕಾಗಿದೆ.
ಮುಂದಿನ ದಿನಗಳಲ್ಲಿ ಪುತ್ತೂರು ಶಾಸಕರು ತಮ್ಮ ವರ್ತನೆಯನ್ನು ತಿದ್ದಿಕೊಂಡು ತಮ್ಮ ಬೆಂಬಲಿಗರಿಗೆ ಬುದ್ದಿ ಹೇಳುವ ಕೆಲಸವನ್ನು ಮಾಡಬೇಕಿದೆ. ಅದನ್ನು ಬಿಟ್ಟು ಗೂಂಡಾ ಗಿರಿಯನ್ನು ಸಮರ್ಥಿಸಿಕೊಂಡು ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದ್ದೆ ಆದರೆ ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರು ಸಮರ್ಥರಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮಾತ್ರಕ್ಕೆ ತಾನು ಏನು ಮಾಡಿದರೂ ಸರಿ ಎಂಬ ಮನೋಭಾವನೆಯಿಂದ ಪುತ್ತೂರು ಶಾಸಕರು ಹೊರಬರಲಿ. ಇಲ್ಲವಾದಲ್ಲಿ ಅದರ ಪರಿಣಾಮವನ್ನು ಅವರೇ ಅನುಭವಿಸಬೇಕಾದೀತು.
ಅಲ್ಲದೆ ಘಟನೆಯ ಸಂದರ್ಭದಲ್ಲಿ ಸುಳ್ಯ ಪೊಲೀಸರು ಮೂಕ ಪ್ರೇಕ್ಷಕ ರಾಗಿದ್ದುದು ಮಾತ್ರವಲ್ಲದೆ ಸಂತ್ರಸ್ತರ ಮೊಬೈಲ್ ನಿಂದ ಘಟನೆಯ ಸಾಕ್ಷಿಗಳನ್ನು ನಾಶಪಡಿಸಿರುವುದು ಅವರ ಪಕ್ಷಪಾತಿತನಕ್ಕೆ ಸಾಕ್ಷಿಯಾಗಿದೆ. ಸರಕಾರ ಬದಲಾಗಿದೆ ಎಂದು ಪೊಲೀಸರು ಕಾನೂನು ಪಾಲಿಸದೇ ಹೋದಲ್ಲಿ ಇಲಾಖೆಯೂ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳಲಿದೆ ಎಂಬುದಾಗಿ ಎಚ್ಚರಿಸಬಯಸುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.