ಜೂ.4 ರಂದು ಅಡ್ಕಾರು ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

0


ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲರಿಂದ ಧಾರ್ಮಿಕ ಉಪನ್ಯಾಸ

ಸುಳ್ಯದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜೂ.೪ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಬೋರ್ಕರ್ ಭಗವಾನ್ ಕನ್‌ಸ್ಟ್ರಕ್ಷನ್ ಇವರು ಹೇಳಿದ್ದಾರೆ.
ಮೇ.೨೭ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು. ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಮೂಲಕ ಹಿಂದು ಸಮಾಜವನ್ನು ಒಟ್ಟು ಗೂಡಿಸುತ್ತೇವೆ. ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಸಭೆ ನಡೆಯಲಿದ್ದು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನ.ಪಂ. ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಅಡ್ಕಾರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಮಂಡೆಕೋಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಕೃಷಿಕ ಹರೀಶ್ ರಾವ್ ಗಬ್ಬಲಡ್ಕ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯುವುದು.
ಈ ಕಾರ್ಯಕ್ರಮದಲ್ಲಿ ಹಿಂದು ಸಮಾಜದ ಸಮಸ್ತರು, ಪುತ್ತಿಲ ಅಭಿಮಾನಿಗಳು ಭಾಗವಹಿಸುತ್ತಾರೆ ಎಂದ ಅವರು ರುನ್ ಕುಮಾರ್ ಪುತ್ತಿಲರನ್ನು ಮೆರವಣಿಗೆಯಲ್ಲಿ ಜಾಲ್ಸೂರಿನಿಂದ ಕರೆತರಲಾಗುವುದು ಎಂದು ಮಾಹಿತಿ ನೀಡಿದರು.
ಪುತ್ತಿಲರಿಗೆ ಬೆಂಬಲ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲರಿಗೆ ಅವಕಾಶ ಸಿಗಬೇಕೆನ್ನುವ ಮಾತು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಸುಳ್ಯದಲ್ಲಿಯೂ ಆ ಟ್ರೆಂಡ್ ಇದೆ. ಆ ಬಗ್ಗೆ ಹಿರಿಯರು ತೀರ್ಮಾನ ಕೈಗೊಳ್ಳುತ್ತಾರಾದರೂ ಅವರಿಗೆ ಅವಕಾಶ ಸಿಗಬೇಕೆನ್ನುವುದು ಹಿಂದು ಸಮಾಜದ ಬೇಡಿಕೆ. ನಾವು ಕೂಡಾ ಅವರನ್ನೇ ಬೆಂಬಲಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಗೋಪಾಲಕೃಷ್ಣರು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸುಧಾಕರ ಬಾಟೋಳಿ ಬಡ್ಡಡ್ಕ, ಸೂರ್ಯ ಮುಗೇರು ಕನಕಮಜಲು, ರಾಮ್ ಕುಮಾರ್ ಹೆಬ್ಬಾರ್ ಮಂಡೆಕೋಲು, ರಕ್ಷಿತ್ ಅಡ್ಕಾರು, ಪುಷ್ಪಾಧರ ಕೆ.ಜಿ. ಅರಂತೋಡು, ಶರತ್ ಉಬರಡ್ಕ, ಕಿಶನ್ ಹಳೆಗೇಟು ಇದ್ದರು.