ತಾಲೂಕು ಕ್ರೀಡಾಂಗಣ : ವ್ಯವಸ್ಥೆ ಸರಿಪಡಿಸದಿದ್ದರೆ ಲೋಕಾಯುಕ್ತ ತನಿಖೆಗೆ ಚಿಂತನೆ

0


ಅಧಿಕಾರಿಗಳು ಬಿಜೆಪಿ ಆಡಳಿತದ ಗುಂಗಿನಿಂದ ಹೊರ ಬನ್ನಿ : ಕಾಂಗ್ರೆಸ್ ಎಚ್ಚರಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಸುಳ್ಯದ ಅಧಿಕಾರಿಗಳು ಮಾತ್ರ ಬಿಜೆಪಿ ಆಡಳಿತದ ಗುಂಗಿನಿಂದ ಹೊರ ಬಂದಿಲ್ಲ. ಜನಪ್ರತಿನಿಧಿಗಳು ಕರೆ ಮಾಡಿ ಸಾರ್ವಜನಿಕ ಸಮಸ್ಯೆಯನ್ನು ಹೇಳಿಕೊಂಡರೆ ಸ್ಪಂದಿಸುವುದಿಲ್ಲ. ಆದ್ದರಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸುಳ್ಯ ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಮೇ.೨೭ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರೆಲ್ಲ ರಸ್ತೆಯಲ್ಲಿ ಹರಿಯುತ್ತಿದೆ. ಅಧಿಕಾರಿಗಳಿಗೆ ಹೇಳಿದರೂ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿಕೊಂಡರು.


ತಾಲೂಕು ಕ್ರಿಡಾಂಗಣದ ಮಣ್ಣು ಕುಸಿಯುವ ಭೀತಿಯಲ್ಲಿದೆ. ಕ್ರೀಡಾಂಗಣದ ಕೆಳ ಭಾಗದಲ್ಲಿ ಮನೆ ಕಟ್ಟಿರುವವರು ಆತಂಕದಲ್ಲಿದ್ದಾರೆ. ಆದ್ದರಿಂದ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸರಿಯಾದ ರೀತಿಯಲ್ಲಿ ಕೆಲಸ ಮಾಡದಿದ್ದರೆ ಮುಂದಿನ ನ.ಪಂ. ಸಾಮಾನ್ಯ ಸಭೆಯಲ್ಲಿ ಈ ಕುರಿತು ಲೋಕಾಯುಕ್ತ ತನಿಖೆಗೆ ಬರೆಯಲು ಒತ್ತಾಯಿಸುತ್ತೇವೆ ಎಂದು ಹೇಳಿದರು.


ತಾಲೂಕಿನಲ್ಲಿ ಸಮಸ್ಯೆಗಳ ಆಗರ ಹಲವು ಇದೆ. ಸರಿ ಪಡಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದನೆ ಇಲ್ಲ. ಅವರು ಬಿಜೆಪಿ ಸರಕಾರದ ಗುಂಗಿನಲ್ಲಿದ್ದಾರೆ. ಇದೆಲ್ಲವನ್ನು ನಾವು ಅರಿತಿzವೆ. ಜನರಿಗೆ ಸರಿಯಾಗಿ ಸೇವೆ ನಿಡುವವರು, ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡುವವರು ಮಾತ್ರ ಇಲ್ಲಿರಿ. ಹಾಗೆ ಇರಲು ಇಷ್ಟವಿಲ್ಲದಿದ್ದರೆ ನಮಗೆ ತಿಳಿಸಿ ಅವರನ್ನು ಬೇರೆಡೆಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದ ಅವರು ಭ್ರಷ್ಟಾಚಾರ ತಡೆಯಲು ಯುವಕರ ತಂಡ ಮಾಡುತ್ತೇವೆ. ಪ್ರಕರಣವನ್ನು ಪತ್ತೆ ಮಾಡಿ ಮುಖ್ಯಮಂತ್ರಿ – ಉಪಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಇಲ್ಲಿ ಅಕ್ರಮ – ಸಕ್ರಮ ಕಡತ ವಿಲೇವಾರಿಗೆ ಅಧಿಕಾರಿಗಳು ೧ ಲಕ್ಷರೂ ತಗೊಂಡ ನಿದರ್ಶನವಿದೆ. ಮುಂದೆ ಈ ರೀತಿ ಆಗದಂತೆ ನಾವು ತಡೆಯುತ್ತೇವೆ ಎಂದು ಅವರು ಹೇಳಿದರಲ್ಲದೆ, ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತೇವೆ ಎಂದರು.


ಕಾಂಗ್ರೆಸ್ ಪಕ್ಷ ಮಾತು ಕೊಟ್ಟಂತೆ ಅಧಿಕಾರಕ್ಕೆ ಬಂದ ೨೪ ಗಂಟೆಯ ಒಳಗೆ ಗ್ಯಾರಂಟಿ ಘೋಷಣೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಅದನ್ನು ಜಾರಿಗೊಳಿಸಲು ಹಣಕಾಸಿನ ವ್ಯವಸ್ಥೆ ನೋಡಿಕೊಂಡು ಮಾಡುತ್ತಾರೆ. ೨೦೧೪ರಲ್ಲಿ ಮೋದಿಯವರು ಕಪ್ಪು ಹಣ ತಂದು ೧೫ ಲಕ್ಷ ಎಲ್ಲರಿಗೂ ಕೊಡುತ್ತೇವೆ ಎಂದಿದ್ದರು ಇದುವರೆಗೆ ಕೊಟ್ಟಿದ್ದಾರ?. ಜನ್‌ಧನ್ ಯೋಜನೆಯ ಅಕೌಂಟ್ ಏನಾಯಿತು ? ಎಂದ ವೆಂಕಪ್ಪ ಗೌಡರು ಕಾಂಗ್ರೆಸ್ ಅವರ ಹಾಗೆ ಮಾಡುವುದಿಲ್ಲ. ಕೊಟ್ಟ ಮಾತು ಉಳಿಸುತ್ತೇವೆ ಎಂದು ಹೇಳಿದರು.
ಸುಳ್ಯದ ವಳಲಂಬೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಕಿದ್ದ ಬ್ಯಾನರ್‌ಗೆ ವಿಘ್ನ ಸಂತೋಷಿಗಳು ಬೆಂಕಿ ಹೆಚ್ಚಿದ್ದಾರೆ. ಇದು ಹೀಗೆ ಮುಂದುವರಿದರೆ ಕ್ರಿಯೆಗೆ ನಾವು ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಕುರಿತು ಸುಳ್ಯದ ಯುವಕ ಅವಹೇಳನಕಾರಿಯಾಗಿ ಕಮೆಂಟ್ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆಪಿಸಿಸಿ ಸಂಯೋಜಕ ಎಸ್.ಸಂಶುದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರುಗಳಾದ ಬಾಲಕರಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತ ಇದ್ದರು.