ಸಾವಯವ ಸಾಧನೆಯ ಮೂಲಕ ಕೃಷಿಕರಿಗೆ ಆಶಾಕಿರಣ

0

ಸ್ವಂತ ಉದ್ಯಮ ಬಿಟ್ಟು ಕೃಷಿ ಕಾಯಕ ನಿರತರಾದ ವಿಷ್ಣು ಕಿರಣ

✍️ ರಮೇಶ್ ನೀರಬಿದಿರೆ

ಪದವಿ ಪಡೆದು ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವಕನೋರ್ವ ಕೃಷಿಯ ಬಗ್ಗೆ ಆಸಕ್ತಿ ತಾಳಿ ಊರಿಗೆ ಮರಳಿ ಸಾವಯವ ಕೃಷಿಯಲ್ಲಿ ಯಶಸ್ಸುಗಳಿಸುವುದರೊಂದಿಗೆ ಸಾವಯವ ಗೊಬ್ಬರವನ್ನು ತಯಾರಿಸಿ ಕೃಷಿಕರಿಗೆ ಪೂರೈಸುತ್ತಿದ್ದಾರೆ.

ದುಗ್ಗಲಡ್ಕ ನೀರಬಿದಿರೆಯ ಪ್ರಗತಿಪರ ಕೃಷಿಕರು, ಮಾಜಿ ಮಂಡಲ ಪ್ರಧಾನರಾಗಿದ್ದ ದಿ. ಎಂ.ವಿ. ವೆಂಕಟ್ರ ಮಣ ಭಟ್ ರ ಪುತ್ರ ವಿಷ್ಣು ಕಿರಣ್ ರವರು ಸಾವಯವ ಕೃಷಿ ಮತ್ತು ಗೊಬ್ಬರ ತಯಾರಿಕೆಯಲ್ಲಿ ಯಶಸ್ಸು ಕಂಡವರು.

ವಿದ್ಯುನ್ಮಾನ ಕ್ಷೇತ್ರದಲ್ಲಿ ಪದವೀಧರನಾಗಿ ಬಳಿಕ ಡಿಪ್ಲೋಮಾ ಅಂಡ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಇನ್ನೊಂದು ಪದವಿ ಪಡೆದು ಬೆಂಗಳೂರಿನ ಕಂಪ್ಯೂಟರ್ ಇಂಡಿಯಾ ಕಂಪನಿಯಲ್ಲಿ ದುಡಿದು ಕೆಲವು ವರ್ಷ ಮಂಗಳೂರಿನಲ್ಲಿ ಸ್ವಂತ ಉದ್ಯಮ ನಡೆಸಿದರು. ಬಳಿಕ ಉದ್ಯೋಗವನ್ನು ಬಿಟ್ಟು ಊರಿಗೆ ಮರಳಿದ ಅವರು ಕೃಷಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡರು.

ಅಡಿಕೆ, ತೆಂಗು, ರಬ್ಬರ್ ಹೀಗೆ ಮಿಶ್ರ ಬೆಳೆಯನ್ನು ಹೊಂದಿದ ಅವರಿಗೆ ರಾಸಾಯನಿಕ ಗೊಬ್ಬರ ದ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಭೂಮಿ ಫಲವತ್ತತೆ ಕಳೆದುಕೊಳ್ಳುವುದರಿಂದ ಆಹಾರ ವಿಷಯುಕ್ತವಾಗುತ್ತಿರುವುದನ್ನು ಮನಗಂಡರು. ಸಾವಯವ ಕೃಷಿಯತ್ತ ಮನಸ್ಸು ಮಾಡಿದರು.
ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಿದ್ದ ಅವರು ದೇಶಿ ತಳಿಯ ಹಸುಗಳನ್ನು ಸಾಕಲಾರಂಭಿಸಿದರು.

ಈಗ ಅವರಲ್ಲಿ 18 ದೇಶಿ ತಳಿಯ (ಗಿರ್ ಮತ್ತು ಮಲೆನಾಡ ಗಿಡ್ಡ) ದನಗಳಿವೆ. ಈ ಹಸುಗಳ ಸಗಣಿಯನ್ನು ನೇರವಾಗಿ ಕೃಷಿಗೆ ಹಾಕಿದರೆ ತನ್ನಲ್ಲಿರುವ ಕೃಷಿಗೂ ಸಾಕಾಗುವುದಿಲ್ಲ, ಪ್ರತಿಫಲವು ಕಡಿಮೆ ಎಂದು ಯೋಚಿಸಿದ ಅವರು ಸೆಗಣಿಯನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಕೆಯ ಚಿಂತನೆ ಮಾಡಿ, ಗೊಬ್ಬರ ತಯಾರಿಸಲು ಮುಂದಾದರು.

ಈ ಪ್ರಯೋಗದಿಂದ ಅಡಿಕೆ ಮತ್ತು ತೆಂಗು ಕೃಷಿಯಲ್ಲಿ ಪ್ರಗತಿಯನ್ನು ಕಂಡರು, ತನ್ನ ಕೃಷಿ ತೋಟಕ್ಕೆ ಇದೇ ಗೊಬ್ಬರವನ್ನು ಹಾಕಿದರು. ಈ ಪ್ರಯೋಗದಿಂದಾಗಿ ಫಸಲು ಅಧಿಕವಷ್ಟೇ ಅಲ್ಲದೆ ನಲ್ಲಿ ಉದುರುವ ಸಮಸ್ಯೆ ನೀಗಿತು. ಮರದ ಬುಡದಲ್ಲಿ ಹೆಚ್ಚು ತೇವಾಂಶ ಉಳಿಯುವುದು, ನೀರಿನ ಅಮಿತ ಬಳಕೆ ಸಾಧ್ಯವಾಗುವುದು ಎಂದು ಅರಿತುಕೊಂಡರು.

ಗೊಬ್ಬರ ತಯಾರಿಕೆ ಹೇಗೆ?:
ಕಾಂಕ್ರೀಟಿನ ತೊಟ್ಟಿಯೊಂದರಲ್ಲಿ ದಿನವೂ ಕಸರಹಿತವಾಗಿ ಸಗಣಿಯನ್ನು ಸಂಗ್ರಹಿಸುತ್ತಾರೆ.ಇನ್ನೊಂದು ತೊಟ್ಟಿ ಯಲ್ಲಿ ಒಂದು ಪದರ ಸೆಗಣಿ ಹರಡಿ ,ಒಂದು ಪದರಕ್ಕೆ ಬೇವಿನ ಹಿಂಡಿ ಸೇರಿಸುತ್ತಾರೆ.ಇದೇ ಕ್ರಮದಲ್ಲಿ ಹೊಂಗೆಹಿಂಡಿ,ಹರಳಿಂಡಿ ಶಿಲಾರಂಜಕಗಳನ್ನು ಮಿಶ್ರ ಮಾಡುತ್ತಾರೆ.
ಗೋಮೂತ್ರ, ಕಪ್ಪುಬೆಲ್ಲ, ಸತ್ವಯುತ ಮಣ್ಣು ,ದ್ವಿದಳ ಧಾನ್ಯದ ಹುಡಿ ಇತ್ಯಾದಿ ಮಿಶ್ರಣವನ್ನು ಕೊಳೆಯಿಸಿ ತಯಾರಾದ ಜೀವಾಮೃತವನ್ನು ಇದರೊಂದಿಗೆ ಬೆರೆಸುತ್ತಾರೆ 45 ದಿನಗಳ ಕಾಲ ಗಾಳಿ ಆಡದಂತೆ ಟಾರ್ಪಲಿನಡಿ ಮುಚ್ಚಿಡುತ್ತಾರೆ. ಆಗ ಅದು ಕೃಷಿ ಬಳಕೆಗೆ ಯೋಗ್ಯವಾದ ಸಾವಯವ ಸಂಜೀವಿನಿಯಾಗುತ್ತದೆ. ಈ ಗೊಬ್ಬರ ಅಡಿಕೆ ,ತೆಂಗು ಇತ್ಯಾದಿ ಕೃಷಿಗೆ ಅಲ್ಲದೆ ಹೂವಿನ ಗಿಡಗಳಿಗೆ, ತರಕಾರಿ ಗಿಡಗಳಿಗೆ ಬಳಸಬಹುದಾದ ವಿಶಿಷ್ಟವಾದ ಗೊಬ್ಬರವಾಗುತ್ತದೆ .ತನ್ನ ಕೃಷಿ ತೋಟಕ್ಕೆ ಬಳಸಿ ಹೆಚ್ಚಾಗುವ ಗೊಬ್ಬರವನ್ನು ಪ್ರತಿ ತಿಂಗಳು ಇತರ ರೈತರಿಗೆ ಮಾರಾಟ ಮಾಡುತ್ತಾರೆ.

ಕೃಷಿಗೆ ಎಷ್ಟು ಪ್ರಮಾಣದಲ್ಲಿ ಹಾಕಬೇಕು?
ಭತ್ತ, ಬಾಳೆ ಸೇರಿದಂತೆ ವ್ಯವಸಾ ಯಕ್ಕೂ ಈ ಗೊಬ್ಬರ ಬಳಕೆ ಮಾಡಿ ಫಲಿತಾಂಶ ಕಂಡುಕೊಂಡಿರುವ ವಿಷ್ಣು ಕಿರಣರ ಪ್ರಕಾರ ಒಂದು ಅಡಿಕೆ ಮರಕ್ಕೆ ಎರಡರಿಂದ ನಾಲ್ಕು ಕಿಲೋ,ತೆಂಗಿನ ಮರಕ್ಕೆ ನಾಲ್ಕರಿಂದ ಎಂಟು ಕಿಲೋ,ರಬ್ಬರ್ ಗೆ ೨ ರಿಂದ ೫ ಕೆ.ಜೆ.ಹಾಕಬಹುದು. ಸಾರಜನಕ, ರಂಜಕ, ಪೊಟಾಷ್,ಸತು
ಎಲ್ಲವೂ ಅಗತ್ಯವಾದ ಪರಿಮಾಣದ ಲ್ಲಿದ್ದು ಬೇಕಾದಾಗ ನಿಧಾನವಾಗಿ ಬಿಡುಗಡೆಯಾ ಗುವುದು ಇದರ ಗುಣ ಎಂದು ಹೇಳುತ್ತಾರೆ. ಈ ಗೊಬ್ಬರಕ್ಕೆ ಗೋ ನಿಧಿ ಎಂದು ಹೆಸರು ಕೊಟ್ಟಿದ್ದಾರೆ.
ಅವರು ತಯಾರಿಸುವ ಇನ್ನೊಂದು ಉತ್ಪನ್ನ- ದೇಸಿ ಗೋವಿನ ಮೂತ್ರ ಆಧಾರಿತ ಕೀಟ ನಿಯಂತ್ರಕ ಬೆಳೆ ವರ್ಧಕ ಗವ್ಯಾಮೃತ. ಶುದ್ಧ ದೇಸಿ ಗೋವಿನ ಗೋಮೂತ್ರ ಮಜ್ಜಿಗೆ, 24 ಬಗೆಯ ಗಿಡಮೂಲಿಕೆಗಳು ಕಹಿಬೇವಿನ ಸಾರ ಎಣ್ಣೆ ಇತ್ಯಾದಿಗಳ ಸಂತುಲಿತ ಮಿಶ್ರಣವೇ ಗವ್ಯಾಮೃತ. ಶುದ್ಧ ಸಾವಯವ ಪರಿಸರಕ್ಕೆ ಹಾನಿ ಮಾಡದ ಎಲ್ಲಾ ಬೆಳೆಗಳಿಗೆ ಬಾಧಿಸುವ ಕೀಟಗಳ ರೋಗಗಳ ನಿಯಂತ್ರಣಕ್ಕಾಗಿ ಮತ್ತು ಶಿಲೀಂದ್ರ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳಿಗಿಂತ ನಿಯಂತ್ರಣಕ್ಕಾಗಿ ಇದನ್ನು ಗಿಡಗಳ ಬೆಳವಣಿಗೆ ಹೆಚ್ಚಿಸುವ ಗೊಬ್ಬರವಾಗಿ ವಿಷರಹಿತ ಆಹಾರ ಮತ್ತು ಬೆಳೆಗಳ ಉತ್ಪಾದನೆಗಾಗಿ ಇದನ್ನು ಬಳಸ ಬಹುದು.
ಸಾವಯವ ಕೃಷಿ ಮತ್ತು ಸಾವಯವ ಗೊಬ್ಬರ ತಯಾರಿಕೆಯಲ್ಲಿ ಯಶಸ್ಸು ಗಳಿಸಿರುವ ಪದವೀಧರ ಯುವಕ ವಿಷ್ಣು ಕಿರಣ ನೀರಬಿದಿರೆಯವರ ಕೃಷಿ ಚಟುವಟಿಕೆ ಎಲ್ಲಾ ಯುವಕರಿಗೂ ಮಾದರಿ.

ಆಧುನಿಕ ಕೃಷಿ ಪದ್ಧತಿಯೇ ಹಳದಿರೋಗ ಇತ್ಯಾದಿಗಳಿಗೆ ಕಾರಣ

ಆಧುನಿಕ ಕೃಷಿ ಪದ್ಧತಿಗೆ ಜನರು ಮಾರು ಹೋಗಿದ್ದಾರೆ. ಅಲ್ಪ ಸಮಯದಲ್ಲಿಯೇ ಅಪರಿಮಿತ ಲಾಭ ಪಡೆಯುವ ಉದ್ದೇಶದಿಂದ ರಸಾಯನಿಕ ಗೊಬ್ಬರ ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತೇವೆ.ಇದರಿಂದಾಗಿ ಭೂಮಿಯ ಫಲವತ್ತತೆಯ ಸತ್ವವೇ ಕಳೆದುಹೋಗುತ್ತದೆ.ಅಡಿಕೆಗೆ ಬಂದಿರುವ ಹಳದಿರೋಗಕ್ಕೆ ಇಂತಹ ಪದ್ಧತಿಯೇ ಕಾರಣ.
ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಕಾಲಾಂತರದಲ್ಲಿಯೂ ಭೂಮಿಯ ಪಲವತ್ತತೆ ಹಾಗೇ ಇರುತ್ತದೆ. ನಾನು ತಯಾರಿಸುವ ಗೋ ನಿಧಿ ಗೊಬ್ಬರ ಮತ್ತು ಗವ್ಯಾಮೃತ ಕೀಟ ನಿಯಂತ್ರಕ ಶುದ್ಧ ದೇಶಿ ತಳಿ ದನಗಳ ಸೆಗಣಿ ಮತ್ತು ಮೂತ್ರ ಬಳಸಿಕೊಂಡು ಮಾಡಿರುವುದರಿಂದ ಅಧಿಕ ಸತ್ವಪೂರ್ಣವಾಗಿರುತ್ತದೆ ಎನ್ನುತ್ತಾರೆ
ವಿಷ್ಣು ಕಿರಣ ನೀರಬಿದಿರೆ