ನುಡಿದಂತೆ ನಡೆದ ಕಾಂಗ್ರೆಸ್ : ಬ್ಲಾಕ್ ಕಾಂಗ್ರೆಸ್ ಹರ್ಷ

0


ಆ.15 ರೊಳಗೆ ಎಲ್ಲ ಗ್ಯಾರಂಟಿಗಳು ಜನರಿಗೆ ತಲುಪಲಿದೆ

ಬಿಜೆಪಿ ನುಡಿದಂತೆ ನಡೆಯಲಿ : ಕಾಂಗ್ರೆಸ್ ನಾಯಕರ ಸವಾಲು

ಈ ಬಾರಿಯ ವಿಧಾನ ಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿ ಜಾರಿಗೊಳಿಸಿದ್ದು ಎಲ್ಲ ಗ್ಯಾರಂಟಿಗಳು ಆ.೧೫ರೊಳಗೆ ಜನರ ಕೈ ಸೇರಲಿದೆ. ಈ ನಿರ್ಧಾರ ಐತಿಹಾಸಿಕವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಹೇಳಿದೆ.


ಜೂ.೩ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು, ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿಶ್ಚಲ ಬಹುಮತ ಸಿಕ್ಕಿದ್ದು ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಪೂರ್ಣ ಪ್ರಮಾಣದ ಸರಕಾರಕ್ಕೆ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಿ, ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಇದಕ್ಕಾಗಿ ಸಿದ್ಧರಾಮಯ್ಯರ ನೇತೃತ್ವದ ಸರಕಾರವನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.


ಗೃಹಜ್ಯೋತಿ ಯೋಜನೆಯಲ್ಲಿ ಪ್ರತೀ ಮನೆಗೂ ೨೦೦ ಯುನಿಟ್ ವಿದ್ಯುತ್ ಜುಲೈ ೧ ರಿಂದ, ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯ ಯಜಮಾನಿಗೆ ರೂ. ೨ ಸಾವಿರ ಮಾಸಿಕ ನೀಡಲಾಗುತ್ತಿದ್ದು ಆ.೧೫ರಂದು ಸ್ವಾತಂತ್ರ್ಯೋತ್ಸವದ ದಿನ ಮುಖ್ಯಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡುತ್ತಾರೆ. ಇದಕ್ಕೆ ಜೂ.೧೫ ರಿಂದ ಆರ್ಜಿ ಸಲ್ಲಿಕೆ ಆರಂಭವಾಗುವುದು. ಅನ್ನಭಾಗ್ಯ ಯೋಜನೆಯಲ್ಲಿ ಪ್ರತೀ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ನ ಕುಟುಂಬದ ಎಲ್ಲ ಸದಸ್ಯರಿಗೂ ತಲಾ ೧೦ ಕೆ.ಜಿ. ಅಕ್ಕಿ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜೂ.೧೧ರಿಂದ ಆರಂಭಗೊಳ್ಳಲಿದೆ. ಜತೆಗೆ ಯುವ ನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಇಚ್ಛಾಸಕ್ತಿ ಇದ್ದರೆ ಬಡವರ, ಜನಪರವಾದ ಕೆಲಸ ಮಾಡಬಹುದೆಂದು ಕಾಂಗ್ರೆಸ್ ಸರಕಾರ ತೋರಿಸಿದೆ. ಜಾತಿ, ಧರ್ಮ, ಪಕ್ಷವಿಲ್ಲದೆ ಎಲ್ಲರನ್ನು ಸಮಾನವಾಗಿ ನೋಡುವ ಪಕ್ಷವಿದ್ದರೆ ಅದು ಕಾಂಗ್ರೆಸ್. ಮತ್ತು ನುಡಿದಂತೆ ನಡೆಯುವ ಪಕ್ಷವೂ ಕಾಂಗ್ರೆಸ್. ಎಲ್ಲರೂ ಇದರ ಈ ಸವಲತ್ತು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ಗ್ಯಾರಂಟಿಯ ಘೋಷಣೆ ಸಂದರ್ಭ ಬಿಜೆಪಿಗರು ಇದೊಂದು ಬಿಟ್ಟಿ ಯೋಜನೆ, ರಾಜ್ಯವನ್ನು ದಿವಾಳಿ ಮಾಡುವ ಯೋಜನೆ ಅಂತೆಲ್ಲ ಟೀಕಿಸಿದ್ದಾರೆ. ಅವರು ಟೀಕೆಯನ್ನಷ್ಟೇ ಮಾಡುತ್ತಾರೆ ವಿನಃ ಅವರು ಮಾಡಿದ ಘೋಷಣೆಯನ್ನು ಜಾರಿ ಮಾಡುವತ್ತ ಗಮನ ಹರಿಸಿಲ್ಲ. ಬಿಜೆಪಿ ಹಿಂದೆ ಚುನಾವಣೆ ಸಂದರ್ಭ ಮಾಡಿದ ಘೋಷಣೆಯನ್ನು ಜಾರಿ ಮಾಡಲಿ ಎಂದು ಅವರು ಸವಾಲೆಸೆದರು.


ಭ್ರಷ್ಟಾಚಾರ ನಡೆಸಿದ ಕಾರಣಕ್ಕಾಗಿ ಬಿಜೆಪಿಯನ್ನು ಜನರು ಈ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತದೆ. ತಾಲೂಕಿನಲ್ಲಿಯೂ ಕೂಡಾ ಸರಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಇಲ್ಲದಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿ ಕೋಂಡರೆ ಅಂತಹ ಅಧಿಕಾರಿಗಳನ್ನು ಮನೆಗೆ ಕಳುಹಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಪಿ.ಸಿ. ಜಯರಾಮರು ಉತ್ತರಿಸಿದರು.


ಪ್ರಧಾನಿ ನರೇಂದ್ರ ಮೋದಿಯವರು ವರ್ಷಕ್ಕೆ ೨ ಕೋಟಿ ಉದ್ಯೋಗ ಕೊಡುತ್ತೇವೆ. ೧೫ ಲಕ್ಷ ಹಣ ಎಲ್ಲರ ಅಕೌಂಟಿಗೆ ಹಾಕುತ್ತೇವೆ. ಕಪ್ಪು ಹಣ ತರುತ್ತೇವೆ ಎಂದೆಲ್ಲ ಹೇಳಿಕೊಂಡರು. ಹೇಳಿದ್ದನ್ನೂ ಒಂದು ಮಾಡಿಲ್ಲ.ಅವರು ನುಡಿದಂತೆ ನಡೆಯುವುದನ್ನು ಕಲಿಯಲಿ. ಮತ್ತೆ ಟೀಕೆ ಮಾಡಲಿ ಎಂದು ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಟಿ.ಎಂ. ಶಹೀದ್ ಹೇಳಿದರು.


ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಒಂದಂಶದಿಂದ ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಸುಳ್ಯ ಸೇರಿದಂತೆ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಂಡಿzವೆ ಎಂದು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ನ.ಪಂ. ಸದಸ್ಯ ಶರೀಫ್ ಕಂಠಿ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತನ್ ಕೊಡಪಾಲ ಇದ್ದರು.