ಕುಕ್ಕೆಶ್ರೀ ದೇವಳಕ್ಕೆ 27 ಲಕ್ಷ ಮೌಲ್ಯದ ಯಂತ್ರೋಪಕರಣ ಕೊಡುಗೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೈದರಬಾದ್‌ನ ಎಎಂಆರ್ ಗ್ರೂಪ್‌ನ ಆಡಳಿತ ನಿರ್ದೇಶಕ ಎ.ಮಹೇಶ್ ರೆಡ್ಡಿ ಇಂದು 27 ಲಕ್ಷ ರೂ ಮೌಲ್ಯದ ಬೋಜನ ಪ್ರಸಾದ ತಯಾರಿಕಾ ಮತ್ತು ಲಾಡು ಪ್ರಸಾದ ತಯಾರಿಕಾ ಯಂತ್ರೋಪಕರಣಗಳನ್ನು ಕಾಣಿಕೆ ರೂಪದಲ್ಲಿ ದೇವಳಕ್ಕೆ ಅರ್ಪಿಸಿದರು.


ಉದ್ಯಮಿ ಎ.ಮಹೇಶ್ ಮತ್ತು ಅವರ ಪತ್ನಿ ಕಾಣಿಕೆಯನ್ನು ಶ್ರೀ ದೇವಳಕ್ಕೆ ಹಸ್ತಾಂತರಿಸಿದರು.

ಅನ್ನ ಪ್ರಸಾದ ವಿತರಣೆಗೆ 26 ಅಡಿ ಎತ್ತರದ 20 ಕೈಗಾಡಿಗಳು, 15 ಅಡಿ ಎತ್ತರದ 10 ಕೈ ಗಾಡಿಗಳು, 23 ಅಡಿ ಎತ್ತರದ ಸಾಂಬಾರು ವಿತರಣಾ ಕೈಗಾಡಿ 20, 28 ಅಡಿ ಎತ್ತರದ 10 ಸಾಂಬಾರು ವಿತರಣಾ ಕೈಗಾಡಿಗಳು, ನೀರು ವಿತರಣೆಗೆ 10 ಕೈಗಾಡಿ, ತರಕಾರಿ ಕತ್ತರಿಸುವ ಸಣ್ಣ ಯಂತ್ರ 1, ತರಕಾರಿ ಕತ್ತರಿಸುವ ದೊಡ್ಡ ಯಂತ್ರ ಒಂದನ್ನು ಅರ್ಪಿಸಿದರು.ಇದೇ ಸಂದರ್ಭ ಲಾಡು ಪ್ರಸಾದ ತಯಾರಿಕೆಗೆ ಸಹಕಾರಿಯಾಗಲು ಲಾಡು ತಯಾರಿಕಾ ಯಂತ್ರ, ಬೂಂದಿ ತಯಾರಿಕಾ ಯಂತ್ರ, ಬೂಂದಿ ಮಿಶ್ರಣ ಯಂತ್ರ, ಬೂಂದಿ ಹರಡಲು ದೊಡ್ಡ ಟ್ರೇ ಸಮರ್ಪಿಸಿದರು.

ಈ ರೀತಿಯಾಗಿ 27 ಲಕ್ಷ ಮೊತ್ತದ ಕೊಡುಗೆಗಳನ್ನು ಶ್ರೀ ದೇವಳಕ್ಕೆ ಹಸ್ತಾಂತರಿಸಿದರು.


ಉದ್ಯಮಿ ಮಹೇಶ್ ರೆಡ್ಡಿ ಅವರೊಂದಿಗೆ ಅದಾನಿ ಗ್ರೂಪ್ಸ್ನ ಉಪಾಧ್ಯಕ್ಷ ನಂದ ಕಿಶೋರ್, ಬೆಂಗಳೂರಿನ ಶೀಲಾ ಇಕ್ಯೂಪ್‌ಮೆಂಟ್ಸ್ನ ನಿರ್ದೇಶಕ ರವೀಂದ್ರನಾಥ್ ಮಾರ್ಲ ಆಗಮಿಸಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ,ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನೋಹರ ರೈ, ವನಜಾ.ವಿ.ಭಟ್, ಶೋಭಾ ಗಿರಿಧರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಇನ್ನು ಕೆಲವೇ ಸಮಯದಲ್ಲಿ ಸುಮಾರು 1 ಲಕ್ಷ 40 ಸಾವಿರ ಮೌಲ್ಯದ ತೆಂಗಿನ ಕಾಯಿ ಹೆರೆಯುವ ಯಂತ್ರ, ಸುಮಾರು 2 ಲಕ್ಷ 98 ಸಾವಿರ ಮೌಲ್ಯದಲ್ಲಿ ಏಕಕಾಲದಲ್ಲಿ 250 ಕೆ.ಜಿ ತರಕಾರಿ ಸ್ವಚ್ಚಗೊಳಿಸಿ ಅದನ್ನು ಕತ್ತರಿಸುವ ದೊಡ್ಡ ಯಂತ್ರ, 2 ಲಕ್ಷ 16 ಸಾವಿರ ಮೌಲ್ಯದಲ್ಲಿ ತಟ್ಟೆ ವಿತರಣಾ ಕೈಗಾಡಿಗಳನ್ನು ವಿತರಿಸಲಿದ್ದಾರೆ.

ಈ ಯಂತ್ರಗಳನ್ನು ಶ್ರೀ ದೇವಳಕ್ಕೆ ಸಮರ್ಪಿಸಲು ಅವಕಾಶ ನೀಡುವಂತೆ ಉದ್ಯಮಿ ಮಹೇಶ್ ರೆಡ್ಡಿ ಲಿಖಿತವಾಗಿ ಶ್ರೀ ದೇವಳದ ಆಡಳಿತ ಮಂಡಳಿಯನ್ನು ವಿನಂತಿಸಿದರು.