ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ, ಉಪಾಧ್ಯಕ್ಷೆ ಕೆ. ಕಮಲ ನಾಗಪಟ್ಟಣಅವಿರೋಧ ಆಯ್ಕೆ

0

ಮಹಿಳೆಯರಿಗೆ ಒಲಿದ ಅಧ್ಯಕ್ಷ ಉಪಾಧ್ಯಕ್ಷ ಎರಡು ಸ್ಥಾನಗಳು

ಆಲೆಟ್ಟಿ ಗ್ರಾಮ ಪಂಚಾಯತ್ ಇದರ ಮುಂದಿನ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು.

ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ಅಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಕಣಕ್ಕೂರು ರವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಇದೀಗ ಮುಂದಿನ ಎರಡುವರೆ ವರ್ಷದ ಅವಧಿಗೆ ಮೀಸಲಾತಿ ಪ್ರಕಟಗೊಂಡಂತೆ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಉಪಾಧ್ಯಕ್ಷತೆಗೆ ಸಾಮಾನ್ಯ ವರ್ಗದ ಸದಸ್ಯರು ಅರ್ಹರಾಗಿರುತ್ತಾರೆ.
ಪಂಚಾಯತ್ ನಲ್ಲಿ ಒಟ್ಟು 21 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿದ್ದು ಬಿಜೆಪಿ ಬೆಂಬಲಿತ 13 ಮಂದಿ ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿತ 8 ಮಂದಿ ಸದಸ್ಯರನ್ನು ಹೊಂದಿದೆ.

ಅಧ್ಯಕ್ಷತೆಗೆ ಹಿಂದುಳಿದ ವರ್ಗ ಎ ಮಹಿಳೆ ವೀಣಾಕುಮಾರಿ ಆಲೆಟ್ಟಿ ನಾಮಪತ್ರ ಸಲ್ಲಿಸಿರುತ್ತಾರೆ. ಉಪಾಧ್ಯಕ್ಷತೆಗೆ ಸಾಮಾನ್ಯ ವರ್ಗದಿಂದ ಕೆ. ಕಮಲ ನಾಗಪಟ್ಟಣ ರವರು ನಾಮಪತ್ರ ಸಲ್ಲಿಸಿರುತ್ತಾರೆ. ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ
ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಪಂಜ ವಲಯ ಅರಣ್ಯ ಅಧಿಕಾರಿ ಗಿರೀಶ್ ರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮಧ್ಯಾಹ್ನದ ವೇಳೆಗೆ ಅಧ್ಯಕ್ಷರಾಗಿ ವೀಣಾಕುಮಾರಿ ಹಾಗೂ ಉಪಾಧ್ಯಕ್ಷರಾಗಿ
ಕೆ. ಕಮಲ ನಾಗಪಟ್ಟಣ ರವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ಪಿ.ಡಿ.ಒ ಸೃಜನ್ ಎ.ಜಿ, ಪಂಚಾಯತ್ ಸದಸ್ಯರು ಪಕ್ಷದ ನಾಯಕರು ಉಪಸ್ಥಿತರಿದ್ದರು.

ಪಕ್ಷದ ನಾಯಕರು ಹಾಗೂ ಪಂಚಾಯತ್ ಸದಸ್ಯರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಹಾರಾರ್ಪಣೆ ಮಾಡಿ ಹೂ ಗುಚ್ಛ ನೀಡಿ ಅಭಿನಂದಿಸಿದರು.

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆಯವರು ಮಾತನಾಡಿ ಗ್ರಾಮದ ಅಭಿವೃದ್ಧಿ ಪರ ಚಿಂತನೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತಾಲೂಕಿನಲ್ಲಿ ಆಲೆಟ್ಟಿ ಗ್ರಾಮವು ಮಾದರಿ ಗ್ರಾಮವಾಗಲಿ.

ಪಕ್ಷ ಭೇದ ಮರೆತು ಆಲೆಟ್ಟಿ ಪಂಚಾಯಿತಿನ ವ್ಯಾಪ್ತಿಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸದಸ್ಯರ ಸಹಕಾರದೊಂದಿಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಪಡಿಸುವಂತಾಗಲಿ ಎಂದು ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಶುಭ ಹಾರೈಸಿದರು.

ಮುಂದಿನ ಅವಧಿಯಲ್ಲಿ ಒಗ್ಗಟ್ಟಾಗಿ ಸೇರಿ ಹೊಂದಾಣಿಕೆಯಿಂದ ಅಭಿವೃದ್ಧಿ ಕಾರ್ಯ ನಡೆಸುತ್ತೇವೆ. ಸರಕಾರದ ಮಟ್ಟದಲ್ಲಿ ಅನುದಾನ ತರಿಸುವಲ್ಲಿ ಸಹಕಾರ ನೀಡುತ್ತೇವೆ ಎಂದು
ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು ಅಭಿಪ್ರಾಯ ವ್ಯಕ್ತಪಡಿಸಿದರು.
ಪಂಚಾಯತ್ ನಲ್ಲಿ ರಾಜಕೀಯ ರಹಿತವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಕೈ ಜೋಡಿಸುತ್ತೇವೆ ಎಂದು ಸದಸ್ಯೆ ಗೀತಾ ಕೋಲ್ಚಾರು ಶುಭ ಹಾರೈಸಿದರು.

ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.