ಕನಕಮಜಲು ಪ್ರಾ.ಕೃ.ಪ. ಸಹಕಾರಿ ಸಂಘ ಜಾಲ್ಸೂರು ವಾರ್ಷಿಕ ಮಹಾಸಭೆ

0

155.60 ಕೋಟಿ ವ್ಯವಹಾರ, 57.51 ಲಕ್ಷ ಲಾಭ : ಶೇ. 9.5. ಡಿವಿಡೆಂಡ್ ಘೋಷಣೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಜಾಲ್ಸೂರು ಇದರ ವಾರ್ಷಿಕ ಮಹಾಸಭೆಯು ಕನಕಮಜಲಿನ ಸಂಘದ ಪ್ರಧಾನ ಕಛೇರಿಯ ರೈತಸಭಾಭವನದಲ್ಲಿ ಸೆ.17ರಂದು ಜರುಗಿತು.

ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು 2022-23ನೇ ವರ್ಷದ ಆಡಳಿತ ಮಂಡಳಿಯ ವರದಿಯನ್ನು ಸಭೆಗೆ ಮಂಡಿಸಿದರು. ‌ಸಂಘದ ಮಾಜಿ ಅಧ್ಯಕ್ಷ ಜಯರಾಮ ರೈ ಅವರು ಮಾತನಾಡಿ ಸಹಕಾರಿ ಸಂಘದ ಸದಸ್ಯತ್ವ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ. ಸಂಘದ ನಿರ್ದೇಶಕರುಗಳು ಇನ್ನಷ್ಟು ಶ್ರಮವಹಿಸಿ, ಸದಸ್ಯತ್ವ ಹೆಚ್ಚಿಸುವಂತೆ ಸಲಹೆ ನೀಡಿದರು.


ಸಂಘವು ಕಳೆದ ಮಹಾಸಭೆಯಲ್ಲಿ ಸದಸ್ಯರಿಗೆ ಶೇ.8 ಡಿವಿಡೆಂಟ್ ನೀಡಿತ್ತು. ಆದರೆ ಈ ಬಾರಿ ಅದನ್ನು ಶೇ.10 ಡಿವಿಡೆಂಟ್ ನೀಡುವಂತೆ ಸದಸ್ಯರುಗಳು ಸಭೆಯಲ್ಲಿ ಪ್ರಸ್ತಾಪಿಸಿದರು.‌ ಆಗ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಕಳೆದ ವರ್ಷ ಸಂಘವು ಶತಮಾನೋತ್ಸವದ ಪ್ರಯುಕ್ತ ಖರ್ಚು ಹೆಚ್ಚಾಗಿದೆ ಎಂದರು. ಆಗ ಸದಸ್ಯ ಶರತ್ ಅಡ್ಕಾರು ಅವರು ಕಳೆದ ಬಾರಿ ಶೇ.8 ಡಿವಿಡೆಂಟ್ ನೀಡುವಾಗ ಮುಂದಿನ ಬಾರಿ ಶೇ.10 ನೀಡುವುದಾಗಿ ಹೇಳಿದ್ದೀರಿ. ಆದ್ದರಿಂದ ಈ ಬಾರಿ ಶೇ.10 ಡಿವಿಡೆಂಟ್ ನೀಡುವಂತೆ ಹೇಳಿದರು. ಆಗ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಕಳೆದ ಬಾರಿ ಶೇ.8 ನೀಡಿದ್ದೆವು. ಈ ಬಾರಿ ಶೇ.8.5. ಡಿವಿಡೆಂಟ್ ನೀಡುವುದಾಗಿ ತೀರ್ಮಾನಿಸಲಾಗಿದೆ. ಆದರೆ ಸದಸ್ಯರ ಬೇಡಿಕೆಯನ್ನು ಪರಿಗಣಿಸಿ, ಸದಸ್ಯರುಗಳಿಗೆ ಶೇ.9.5 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು. ಆಗ ಮಾಜಿ ಅಧ್ಯಕ್ಷರಾದ ಪದ್ಮನಾಭ ಭಟ್ ಅವರು ಸಂಘದ ಬಂಡವಾಳಕ್ಕೆ ಶೇ.11 ಡಿವಿಡೆಂಟ್ ಬರುತ್ತದೆ. ಶೇ.10 ನೀಡುವಂತೆ ಹೇಳಿದರು. ಆಗ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಶೇ.9.5. ರವರೆಗೆ ಈ ಬಾರಿ ಡಿವಿಡೆಂಟ್ ನೀಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾನಿಧಿ ಯೋಜನೆಯಡಿ ಸಂಘದ ಸದಸ್ಯರ ಮಕ್ಕಳಿಗೆ ಕೊಡಮಾಡುವ ಪ್ರೋತ್ಸಾಹಧನವನ್ನು 12 ಮಂದಿ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ವಿತರಿಸಿದರು.

ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ

ಮಹಾಸಭೆಯಲ್ಲಿ ಸಹಕಾರಿ ಸಂಘದಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಶ್ರೀಮತಿ ಕುಸುಮಾವತಿ ಕಣಜಾಲು ಹಾಗೂ ಗಂಗಾಧರ ಗೌಡ ಕಾಳಮನೆ ಅವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಜಾಲ್ಸೂರಿಗೆ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪನೆ ವಿಚಾರ ಕಾನೂನು ಪ್ರಕಾರ ಮುಂದುವರೆಯಲು ತೀರ್ಮಾನ
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಎಂಬ ಹೆಸರಿನಲ್ಲಿ ಪ್ರಸ್ತುತ ಸಂಘವು ಕಾರ್ಯಾಚರಿಸುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಯೋಜನೆಯಂತೆ ಗ್ರಾಮಕ್ಕೊಂದು ಸಹಕಾರಿ ಸಂಘ ಆಗಬೇಕೆಂದು ಸುತ್ತೋಲೆ ಬಂದಿದ್ದು, ಜಾಲ್ಸೂರಿಗೆ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪಿಸುವಂತೆ ಮಾಜಿ ಅಧ್ಯಕ್ಷ ಜಯರಾಮ ರೈ ವಿಷಯ ಪ್ರಸ್ತಾಪಿಸಿದರು.
ಆಗ ಅಧ್ಯಕ್ಷ ನಾರಾಯಣ ಗೌಡರು ಮಾತನಾಡಿ ಜಾಲ್ಸೂರಿಗೆ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪಿಸುವಂತೆ ನಮಗೆ ಮನವಿ ಪತ್ರ ಬಂದಿದೆ. ಅದನ್ನು ಪುತ್ತೂರು ಸಹಕಾರಿ ಸಂಘದ ನಿಬಂಧಕರಿಗೆ ಹಸ್ತಾಂತರ ಮಾಡುತ್ತೇವೆ ಎಂದರು.
ಆಗ ಜಯರಾಮ ರೈ ಅವರು ಜಾಲ್ಸೂರು ಗ್ರಾಮದಲ್ಲಿ ಸದಸ್ಯತ್ವ ಹೊಂದಿದ ಹೆಚ್ಚು ಜನರಿದ್ದಾರೆ. ಹಾಗೂ ಕೇಂದ್ರ ಸರ್ಕಾರದ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪನೆ ಸುತ್ತೋಲೆಗೆ ಪೂರಕವಾಗಿದ್ದು, ನಮ್ಮ ನಿವೇಧನೆಯನ್ನು ಸ್ವೀಕರಿಸಿ, ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು. ಆಗ ಪದ್ಮನಾಭ ಭಟ್ ಮಳಿ ಅವರು ಮಾತನಾಡಿ ಈ ಬಗ್ಗೆ ಕಾನೂನು ಪ್ರಕಾರ ಏನು ಕ್ರಮ ಮಾಡಬೇಕೋ ಅದನ್ನು ಮಾಡಿ. ಜಾಲ್ಸೂರಿಗೆ ಪ್ರತ್ಯೇಕ ಸಹಕಾರಿ ಸಂಘದ ಬೇಡಿಕೆಗೆ ನಮ್ಮ ಆಕ್ಷೇಪವಿಲ್ಲ ಎಂದರು. ಆಗ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿಯವರು ಸರ್ಕಾರದ ಸುತ್ತೋಲೆ ಪ್ರಕಾರವೇ ನಾವು ಮುಂದಕ್ಕೆ ಹೋಗುತ್ತೇವೆ ಎಂದರು. ಆಗ ಸದಸ್ಯ ಅಬ್ದುಲ್ ಮಜೀದ್ ಅವರು ಇದಕ್ಕೆ ಪೂರಕವಾಗಿ ಮಾತನಾಡಿ ಇದಕ್ಕೆ ಯಾರದ್ದೂ ಆಕ್ಷೇಪವಿಲ್ಲ ಎಂದಾದರೆ ಮಹಾಸಭೆಯಲ್ಲಿ ನಿರ್ಣಯ ಮಾಡಿ ಎಂದು ಹೇಳಿದರು. ಬಳಿಕ ಸರ್ಕಾರದ ನಿರ್ದೇಶನದಂತೆ ಮುಂದುವರೆಯುವುದಾಗಿ ತೀರ್ಮಾನಿಸಲಾಯಿತು.

ಸದಸ್ಯ ವಿಜಯಕುಮಾರ್ ನರಿಯೂರು ಅವರು ಮಾತನಾಡಿ ಸಂಘದಲ್ಲಿ ಹದಿನೆಂಟು ಮಂದಿಗೆ ಸಾಲಮನ್ನಾದ ಹಣ ಇನ್ನೂ ಬಂದಿಲ್ಲ ಎಂದರು. ಬಳಿಕ ಸಾಲಮನ್ನಾ ಹಣದ ಕುರಿತಂತೆ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶೇಷಪ್ಪ ನಾಯ್ಕ ಕಜೆಗದ್ದೆ, ಗಣೇಶ್ ಅಂಬಾಡಿಮೂಲೆ, ಮಹೇಶ್ವರ ಕಾರಿಂಜ, ಸುಖೇಶ್ ಅಡ್ಕಾರುಪದವು, ಸೀತಾರಾಮ ಮಠ, ಶ್ರೀಮತಿ ಭಾರತಿ ಪಿ.ಕೆ., ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಸಂಘದ ಆಂತರಿಕ ಲೆಕ್ಕಪರಿಶೋಧಕ ಕುಶಾಲಪ್ಪ ಗೌಡ ಕಣಜಾಲು, ಕಾನೂನು ಸಲಹೆಗಾರರಾದ ಚಂದ್ರಶೇಖರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಆರ್ಥಿಕ ವರ್ಷದಲ್ಲಿ ಅಗಲಿದ ಸಹಕಾರಿ ಬಂಧುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು ಅವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ವಂದಿಸಿದರು.