ಸುಳ್ಯ ನಗರ ಪಂಚಾಯತ್ ಪೌರಕಾರ್ಮಿಕರ ದಿನಾಚರಣೆ

0

ಕಸ ತುಂಬಿದ್ದ ಶೆಡ್‌ಗೆ ಸೆಗಣಿ ಸಾರಿಸಿ, ತೋರಣಕಟ್ಟಿ ಶೃಂಗಾರ

ಸುಳ್ಯ ನಗರ ಪಂಚಾಯತ್ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಸುಳ್ಯ ನಗರ ಪಂಚಾಯತ್ ಕಚೇರಿ ಪರಿಸರದಲ್ಲಿ ಇಂದು ಹಬ್ಬದ ವಾತಾವರಣ ಕಂಡುಬಂದಿದೆ.

ವರ್ಷವಿಡೀ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ಇಂದು ದಿನನಿತ್ಯದ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅಂದ ಚಂದದ ಉಡುಪುಗಳನ್ನು ಧರಿಸಿ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿಕೊಂಡರು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ತಮ್ಮ ಮನೆಯವರು ಮತ್ತು ಮಕ್ಕಳನ್ನು ಕೂಡ ಕರೆತಂದು ಇವರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಪರಸ್ಪರ ಸಂತೋಷವನ್ನು ಹಂಚಿಕೊಂಡರು.
ಲಂಬಾಣಿ ಸಮುದಾಯದ ಕಾರ್ಮಿಕರ ಮಕ್ಕಳು ತಮ್ಮ ಸಂಪ್ರದಾಯ ಪ್ರಕಾರದ ಲಂಬಾಣಿ ಡ್ರೆಸ್ ಗಳನ್ನು,ಮತ್ತಿತರ ಹೊಸ ಉಡುಪುಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೌರಕಾರ್ಮಿಕರು ಆಟೋಟ ಸ್ಪರ್ಧೆಗೆ ಬಳಸಿಕೊಂಡ ಜಾಗ ನಗರ ಪಂಚಾಯತ್‌ನ ಶೆಡ್ಡ್. ಇದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿದೆ.
ಒಂದು ಸಮಯದಲ್ಲಿ ಕಸದ ರಾಶಿಯಿಂದ ತುಂಬಿ ತುಳುಕುತ್ತಿದ್ದು, ರಾಜ್ಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ನಗರ ಪಂಚಾಯತ್ ಮುಂಭಾಗದ ಕಸ ತುಂಬಿದ್ದ ಶೆಡ್ಡ್ ಇಂದು ಶೃಂಗಾರಗೊಂಡು ಹಸಿರು ತೋರಣಗಳನ್ನು ಕಟ್ಟಿ, ಸಂಪೂರ್ಣ ನೆಲಕ್ಕೆ ಸಗಣಿ ಸಾರಿಸಿ, ಈ ದೃಶ್ಯನೋಡುಗರ ಕಣ್ಮನ ಸೆಳೆಯುತ್ತಿದೆ.

ಕಾರ್ಯಕ್ರಮಕ್ಕೆ ಸಾಥ್ ನೀಡಿರುವ ನಗರ ಪಂಚಾಯತಿನ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪೌರಕಾರ್ಮಿಕರಿಗೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಥಮವಾಗಿ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧಾ ಕಾರ್ಯಕ್ರಮವನ್ನು ನಗರ ಪಂಚಾಯತಿ ಸದಸ್ಯರು ಮತ್ತು ಮುಖ್ಯಾಧಿಕಾರಿ, ಪೌರ ಕಾರ್ಮಿಕರ ಮುಖಂಡರು ಗಿಡಕ್ಕೆ ನೀರು ಹಾಯಿಸುವ ಮೂಲಕ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ನಗರ ಪಂಚಾಯತಿ ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಬುದ್ಧ ನ್ಯಾಕ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಸುಶೀಲಾ ಜಿನ್ನಪ್ಪ, ಬಾಲಕೃಷ್ಣ ಭಟ್ ಕೊಡಂಕೇರಿ, ಶೀಲಾ ಅರುಣ್ ಕುರುಂಜಿ, ಶಶಿಕಲಾ ನೀರಬಿದಿರೆ, ಹಾಗೂ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪೌರಕಾರ್ಮಿಕರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಗೋಣಿಚೀಲ ಓಟ, ಗುಂಡೆಸತ, ನಿಂಬೆ ಚಮಚ ಓಟ, ಬಕೆಟಿಗೆ ಬಾಲ್ ಹಾಕುವುದು, ಮಡಕೆ ಒಡೆಯುವುದು, ವಿಕೆಟಿಗೆ ರಿಂಗ್ ಹಾಕುವುದು,
ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ೫೦ ಮೀಟರ್ ಓಟ, ಕಪ್ಪೆ ಜಿಗಿತ, ಸಂಗೀತ ಕುರ್ಚಿ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.