ಬಿಜೆಪಿ ಸರಕಾರದ ಅವಧಿಯಲ್ಲಿಯೂ ಹಿಂದೂ ಯುವಕರ ಗಡಿಪಾರಿಗೆ ನೋಟೀಸ್ ಆಗಿತ್ತು

0

ಆಗ ಮಾತನಾಡದ ಸಂಸದರು ಈಗ ಧ್ವನಿ ಯೆತ್ತಿರುವುದು ಚುನಾವಣಾ ರಾಜಕೀಯವೇ? : ಎಂ.ವಿ.ಜಿ.

ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿರುವಾಗಲೂ ಹಿಂದುತ್ವದ ಪ್ರತಿಪಾದಕರಾಗಿದ್ದು ಕೇಸು‌ ಹಾಕಿಸಿಕೊಂಡಿದ್ದ ಯುವಕರ ಗಡಿಪಾರಿಗೆ ನೋಟೀಸ್ ಮಾಡಲಾಗಿತ್ತು. ಆಗ ಧ್ವನಿ ಎತ್ತದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ‌ ನಾಯಕರು ಈಗ ಮಾತನಾಡುತಿರುವುದು ಚುನಾವಣಾ ರಾಜಕೀಯವೇ? ಎಂದು‌ ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.

ನ.17 ರಂದು ಸುಳ್ಯ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆ, ಹಬ್ಬ ಹರಿದಿನಗಳು ಬಂದಾಗ ಶಾಂತಿ ಕದಡುವರೆಂಬ ಕಾರಣಕ್ಕೆ ಕೆಲವರನ್ನು ತಾಲೂಕು ಕಚೇರಿಗೆ ಕರೆಯಿಸಿ 107 ಸೆಕ್ಷನ್ ಪ್ರಕಾರ ಅವರಲ್ಲಿ ಮುಚ್ಚಳಿಕೆ ಬರೆಸುವ ಕ್ರಮ ಹಿಂದಿನಿಂದಲೂ ನಡೆಯುತಿದೆ. ಇದೆಲ್ಲ ಪೋಲೀಸ್ ವರದಿಯ ಆದಾರದಲ್ಲೆ ನಡೆಯುತ್ತಿದೆ. ಅದರ ಮುಂದುವರಿದ ಭಾಗವಾಗಿ ನೋಟೀಸು ನೀಡುತ್ತಾರೆ. ಇದು‌ ಬರೇ ಕಾಂಗ್ರೆಸ್ ಸರಕಾರ ಬಂದಾಗ‌ ಮಾತ್ರ ಆಗೋದಲ್ಲ. ಯಾವ ಸರಕಾರ‌ ಬಂದರೂ ಆಡಳಿತದ ಕಾನೂನು ಸುವ್ಯವಸ್ಥೆಯ ಭಾಗವಾಗಿ ಮಾಡಲಾಗುತ್ತದೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಗುರುಪ್ರಸಾದ್ ಪಂಜರವರಿಗೂ ಗಡಿಪಾರು ನೋಟೀಸ್ ಆಗಿತ್ತು. ಆಗ ನಳಿನ್ ಕುಮಾರ್ ಕಟೀಲ್ ರು ರಾಜ್ಯಾಧ್ಯಕ್ಷರಾಗಿದ್ದರು. ಆ ಸಂದರ್ಭ ಅವರು ಯಾಕೆ ಧ್ವನಿ ಎತ್ತಿಲ್ಲ ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ಪ್ರಮೋದ್ ಮುತಾಲಿಕ್ ಹಿಂದುತ್ವವಾದಿಯಲ್ಲವೇ?. ಅವರನ್ನು‌ ಗಡಿಪಾರು ಮಾಡಿದ್ದು ಯಾರು?. ಬಿಜೆಪಿ ಸರಕಾರವಲ್ಲವೇ?. ಆಗ ಕಣ್ಣಿದ್ದು ಕುರುಡರಂತೆ ಇವರೆಲ್ಲ ಇದ್ದರು. ಇದನ್ನು ಯಾಕೆ ಯಾರೂ ಪ್ರಶ್ನೆ ಮಾಡುತಿಲ್ಲ? ಎಂದು‌ ಹೇಳಿದರು.

ಆದ್ದರಿಂದ ಗಡಿಪಾರು‌ ನೋಟೀಸ್ ವಿಚಾರದಲ್ಲಿ ದೊಡ್ಡ ಅರ್ಥ ಕಲ್ಪಿಸುವುದೇನೂ‌ ಬೇಡ. ಯಾವ ಸರಕಾರ ಬಂದರೂ ಆಡಳಿತದ ಕಾನೂನು ಸುವ್ಯವಸ್ಥೆಯ ಭಾಗವಾಗಿ ಇದೆಲ್ಲ ಆಗುತದೆ. ಇದರಲ್ಲಿ ರಾಜಕಾರಣ ಬೇಡ. ಈ ಪ್ರಕ್ರಿಯೆ ಬಿಜೆಪಿ ಆಡಳಿತದಲ್ಲೂ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಕೆ.ಗೋಕುಲ್ ದಾಸ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಇದ್ದರು.