ಕೆಲಸದ ಸ್ಥಳದಲ್ಲಿ ಏನಾದರೂ ದೌರ್ಜನ್ಯ ನಡೆದರೆ ಮಹಿಳೆಯರು ಧೈರ್ಯದಿಂದ ಪ್ರತಿಭಟಿಸಬೇಕು: ನ್ಯಾಯಾಧೀಶೆ ಕು.ಅರ್ಪಿತಾ

0

ಹಳೆಗೇಟು ಡಿ ಆರ್ ಗಾರ್ಮೆಂಟ್ಸ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಜೀವನ ನಿರ್ವಹಣೆಗಾಗಿ ಮಹಿಳೆಯರು ಉದ್ಯೋಗ ಮಾಡುವ ಸ್ಥಳಗಳಲ್ಲಿ ಅವರ ಮೇಲೆ ಏನಾದರೂ ದೌರ್ಜನ್ಯ ಹಾಗೂ ಕಿರುಕುಳ ಉಂಟಾದರೆ ಧೈರ್ಯದಿಂದ ಪ್ರತಿಭಟಿಸುವ ಶಕ್ತಿಯನ್ನು ಹೊಂದಿಕೊಳ್ಳಬೇಕು ಮತ್ತು ಅದನ್ನು ಎದುರಿಸುವ ದಿಟ್ಟ ಮನಸ್ಸು ಮಹಿಳೆಯರಲ್ಲಿ ಇರಬೇಕು ಎಂದು ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶೆ ಕು. ಅರ್ಪಿತಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಹೇಳಿದ್ದಾರೆ.

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ಸುಳ್ಯ ವಕೀಲರ ಸಂಘ ಇವರ ಸಯುಕ್ತಾಶ್ರಯದಲ್ಲಿ ನವಂಬರ್ 28ರಂದು ಸುಳ್ಳದ ಹಳೆಗೇಟು ಡಿ ಆರ್ ಗಾರ್ಮೆಂಟ್ಸ್ ನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದ ‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳದ’ ಕುರಿತ ಮಾಹಿತಿ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹತ್ತಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುವ ಸಂಸ್ಥೆಗಳಲ್ಲಿ ಐಸಿಸಿ ಸಮಿತಿಯನ್ನು ರಚಿಸಿ ಇದರ ಮುಖೇನ ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕಾಗಿದದ್ದು ಪ್ರತಿಯೊಂದು ಸಂಸ್ಥೆಯ ಕರ್ತವ್ಯವಾಗಿದೆ ಎಂದು ಕಾಯ್ದೆಯ ಅರಿವನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ವಕೀಲರಾದ ಬಿ ಶಂಕರ್ ಕುಮಾರ್ ಮಾತನಾಡಿ ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ತಮ್ಮ ರಕ್ಷಣೆಯನ್ನು ಯಾವುದೆಲ್ಲ ರೀತಿಯಲ್ಲಿ ಮಾಡಿಕೊಳ್ಳಬೇಕು ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ವ್ಯಕ್ತಿಗಳು ಯಾವುದೆಲ್ಲಾ ಪ್ರಕ್ರಿಯೆಗಳು ಮಾಡಿದರೆ ಕಾನೂನಿನಲ್ಲಿ ಅಪರಾಧವಾಗುತ್ತದೆ ಎಂಬ ಮುಂತಾದ ವಿಷಯಗಳಲ್ಲಿ ಮಾಹಿತಿಯನ್ನು ನೀಡಿದರು.
ಮಹಿಳಾ ಸಿಬ್ಬಂದಿಗಳು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಇರುವ ಐಸಿಸಿ ಸಮಿತಿಗೆ ದೌರ್ಜನ್ಯ ಕ್ಕೊಳಗಾದ ಮಹಿಳೆಗೆ ಆರು ತಿಂಗಳೊಳಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗಿದ್ದು, ಅಲ್ಲದೆ ಅಂತಹ ಮಹಿಳೆಯರಿಗೆ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಈ ಸಮಿತಿಯಲ್ಲಿ ಸದಸ್ಯರುಗಳನ್ನು ನೇಮಕ ಮಾಡಲಾಗುತ್ತಿದ್ದು, ಲಿಂಗ, ಜಾತಿ ಧರ್ಮ, ಭೇದವಿಲ್ಲದೆ ಪ್ರತಿಯೊಬ್ಬರಿಗೂ ಇದರಿಂದ ನ್ಯಾಯ ಸಿಗುವ ವ್ಯವಸ್ಥೆಗಳು ಉಂಟಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ್, ಸುಳ್ಯ ಲಯನ್ಸ್ ಅಧ್ಯಕ್ಷ ವೀರಪ್ಪಗೌಡ ಕಣ್ಕಲ್ ಈ ಸಂದರ್ಭದಲ್ಲಿ ಮಾತನಾಡಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಡೆಯುವ ಮಾಹಿತಿ ಕಾರ್ಯಗಾರ ಎಷ್ಟೆಂದು ಪ್ರಯೋಜನಕಾರಿ ಮತ್ತು ಇದರ ಸದುಪಯೋಗವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂದು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ ಆರ್ ಗಾರ್ಮೆಂಟ್ಸ್ ನ ಮಾಲಕರಾದ ರಾಮಚಂದ್ರ ವಹಿಸಿದ್ದರು. ವೇದಿಕೆಯಲ್ಲಿ ಪ್ಯಾನೆಲ್ ವಕೀಲರಾದ ಉಷಾ ಪಿ ಎ ಉಪಸ್ಥಿತರಿದ್ದರು.

ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರುಗಳು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಗಾರ್ಮೆಂಟ್ಸ್ ನ ಮಹಿಳಾ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಂಸ್ಥೆಯ ಸಿಬ್ಬಂದಿಗಳಾದ ಜಯಶ್ರೀ ಬೆಟ್ಟಂಪಾಡಿ ಸ್ವಾಗತಿಸಿ ಅನಿತಾ ವಂದಿಸಿದರು. ವಕೀಲರಾದ ದೀಪಕ್ ಕುತ್ತಮಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಜಯಲಕ್ಷ್ಮಿ ರಾಮಚಂದ್ರ, ಪ್ರಸನ್ನ, ಶಿಲ್ಪಾ ಪ್ರಸನ್ನ ಸಹಕರಿಸಿದರು.