ಸುಬ್ರಹ್ಮಣ್ಯ:ಮಕರ ಸಂಕ್ರಮಣ ಪ್ರಯುಕ್ತ ಶ್ರೀ ದೇವರ ಚಿಕ್ಕರಥೋತ್ಸವ

0

ಇಂದು ಸಂಜೆ ಸುಬ್ರಹ್ಮಣ್ಯ ದೇವರ ರಥೋತ್ಸವ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.15 ರಂದು ಮಕರ ಸಂಕ್ರಮಣದಂದು ನಡೆಯುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕುಕ್ಕೆಲಿಂಗ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವರ ವೈಭವದ ಚಿಕ್ಕರಥೋತ್ಸವ ಜರುಗಿತು. ಶ್ರೀ ದೇವಳದ ಅರ್ಚಕ ವೇದಮೂರ್ತಿ ರಾಮಕೃಷ್ಣ ನೂರಿತ್ತಾಯರು ಉತ್ಸವದ ವಿದಿವಿಧಾನ ನೆರವೇರಿಸಿದರು.

ರಥೋತ್ಸವದ ಸಂದರ್ಭದಲ್ಲಿ ಹೊಸಳಿಗಮ್ಮ ದೈವವು ಶ್ರೀ ದೇವರ ದರುಶನ ಪಡೆಯಿತು. ಮುಂಜಾನೆ ರಥಬೀದಿಗೆ ಆಗಮಿಸಿದ ದೇವರು ಚಿಕ್ಕರಥದಲ್ಲಿ ಆರೂಢರಾದರು.ರಥದಲ್ಲಿ ಶ್ರೀ ದೇವರಿಗೆ ಅರ್ಚಕರು ಪೂಜೆ ನೆರವೇರಿಸಿದರು.ನಂತರ ರಥೋತ್ಸವವವು ರಥಬೀದಿ ವೃತ್ತದ ತನಕ ನಡೆಯಿತು.ನಂತರ ಶ್ರೀ ದೇವರು ಪಾಲಕಿಯಲ್ಲಿ ಸವಾರಿ ಮಂಟಪಕ್ಕೆ ತೆರಳಿದರು.ಸವಾರಿ ಮಂಟಪದ ಸಂಕ್ರಮಣ ಕಟ್ಟೆಯಲ್ಲಿ ಶ್ರೀ ದೇವರ ಕಟ್ಟೆಪೂಜೆ ನೆರವೇರಿತು.

ರಥೋತ್ಸವ ಪೂರೈಸಿ ಆಗಮಿಸಿದ ಶ್ರೀ ದೇವರಿಗೆ ಗೋಪುರದ ಬಳಿ ನಿವಾಳಿ ಸಮರ್ಪಿಸಲಾಯಿತು. ನಂತರ ಶ್ರೀ ದೇವಳದ ದ್ವಾದಶಿ ಮಂಟಪದಲ್ಲಿ ಮಯೂರ ವಾಹನ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.

ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ವಿಶೇಷ ೧೦೮ಕಾಯಿ ಗಣಪತಿ ಹೋಮ ಶ್ರೀ ದೇವಳದ ಒಳಾಂಗಣದಲ್ಲಿ ನೆರವೇರಿತು. ಜ.14 ರಾತ್ರಿ ಕುಕ್ಕೆಲಿಂಗ ದೇವರ ಜಾತ್ರೋತ್ಸವದ ಪ್ರಯುಕ್ತ ದೇವರ ಉತ್ಸವಾಧಿಗಳು ಹೊರಾಂಗಣದಲ್ಲಿ ನೆರವೇರಿತು. ಈ ಸಂದರ್ಭ ಕಾಚುಕುಜುಂಬ ದೈವದ ನಡಾವಳಿ ನಡೆಯಿತು.


ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿಜಿಎಸ್‌ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು,ಮನೋಹರ ರೈ, ಲೋಕೇಶ್ ಮುಂಡೋಕಜೆ, ವನಜಾ ವಿ ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಇಂದು ಸಂಜೆ 6.00 ಗಂಟೆ ಬಳಿಕ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆಯಿತು.