ಸುಳ್ಯ ವಿಧಾನಸಭಾ ಕ್ಷೇತ್ರದ ಮೀಸಲಾತಿ ರೊಟೇಷನ್ : ಎರಡನೇ ಪೂರ್ವಭಾವಿ ಸಭೆ

0

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಧುರೀಣರು, ನ್ಯಾಯವಾದಿಗಳು ಭಾಗಿ

ಜನಾಂದೋಲನ ಸಹಿತ ವಿವಿಧ ಸ್ತರಗಳ ಹೋರಾಟಕ್ಕೆ ನಿರ್ಧಾರ: ಸಮಿತಿಯ ಸಂಚಾಲಕರಾಗಿ ಎಂ ಡಿ ವಿಜಯಕುಮಾರ್

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಇರುವ ಮೀಸಲಾತಿ ರೊಟೇಷನ್ ಮಾದರಿಯಲ್ಲಿ ಇತರೆ ವಿಧಾನಸಭಾ ಕ್ಷೇತ್ರಕ್ಕೂ ಬದಲಾಗಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸಿ ಇದರ ಬಗ್ಗೆ ಆಂದೋಲನ ನಡೆಸಲು ಎರಡನೇ ಪೂರ್ಭಾವಿ ಸಭೆ ಇಂದು ನಡೆದಿದ್ದು, ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಹಾಗೂ ಸಾಮಾಜಿಕ ಮುಖಂಡರನ್ನೊಳಗೊಂಡ ಆಂದೋಲನ ಸಮಿತಿ ರಚಿಸಲಾಯಿತು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರದ ಮೀಸಲಾತಿ ರೊಟೇಷನ್ ಮೂಲಕ ಬದಲಾವಣೆಯಾಗಲೇ
ಬೇಕೆಂದು ಸಭೆಯಲ್ಲಿ ಭಾಗವಹಿಸಿದ ವಿವಿಧ ರಾಜಕೀಯ ಮುಖಂಡರುಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿ ಪತ್ರಿಕೆಯ ವರದಿಗಾರ ಹರೀಶ್ ಬಂಟ್ವಾಳ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಆರಂಭದಲ್ಲಿ ಡಾ. ಯು.ಪಿ. ಶಿವಾನಂದರು ಮಾತನಾಡಿ, ಕ್ಷೇತ್ರ ಮೀಸಲಾತಿ ತೆಗೆಯಬೇಕು ಎಂಬುದು ನಮ್ಮ ಉದ್ದೇಶವಲ್ಲ. ಬದಲಾಗಿ ಇಲ್ಲಿರುವ ಮೀಸಲಾತಿಯು ರೊಟೇಷನ್ ಮೂಲಕ ಜಿಲ್ಲೆಯ ಇತರೆ ಕ್ಷೇತ್ರಕ್ಕೂ ಬದಲಾಗಬೇಕು. ಆ ಮೂಲಕ ಇತರ ಕ್ಷೇತ್ರದ ದಲಿತರೂ ಸಬಲರಾಗುವಂತಾಗಬೇಕು. ಮೀಸಲಾತಿಯಲ್ಲಿ ಮಹಿಳೆಯರಿಗೂ ಪ್ರಾಧಾನ್ಯತೆ ಸಿಗಬೇಕಾಗಿದೆ. ಅದಕ್ಕಾಗಿ ಜನರಿಂದ ಕ್ಷೇತ್ರ ಮೀಸಲಾತಿಯು ಜನಾಂದೋಲನದ ಮೂಲಕ ಬದಲಾಗಬೇಕು. ಈ ನಿಟ್ಟಿನಲ್ಲಿ ಮೀಸಲಾತಿ ಹೋರಾಟ ಸಮಿತಿಯನ್ನು ರಚಿಸಿ ಅದರ ಮೂಲಕ ಸಾಮಾಜಿಕವಾಗಿ ಜನರು ಒಪ್ಪುವ ರೀತಿಯಲ್ಲಿ ಅದೇ ರೀತಿ ಕಾನೂನಾತ್ಮಕವಾಗಿ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಹೇಳಿದರು. ಕ್ಷೇತ್ರದ ಜನರ ಬೆಂಬಲ ಇದಕ್ಕೆ ಅತಿ ಅವಶ್ಯಕವಾಗಿದ್ದು ಈ ಆಂದೋಲನ ಪೂರ್ಣವಾಗಿ ಜನರ ಆಂದೋಲನವಾಗಿ ಮುಂದುವರಿಯಬೇಕಾಗಿದೆ ಎಂದು ಹೇಳಿದರು. ಸುದ್ದಿ ಮಾಧ್ಯಮವು ಮೀಸಲಾತಿ ರೊಟೇಷನ್ ಗಾಗಿ ಬೆಂಬಲ ನೀಡಲಿದೆ. ಅಲ್ಲದೆ ಎಲ್ಲಾ ಮಾಧ್ಯಮದವರ ಸಹಕಾರ ಪಡೆದು ಆಂದೋಲನ ಸಮಿತಿಗೆ ಶಕ್ತಿ ನೀಡಲಿದೆ ಎಂದು ಹೇಳಿದರು.

ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್., ಕಾಂಗ್ರೆಸ್ ನಾಯಕ ಭರತ್ ಮುಂಡೋಡಿ, ಟಿ.ಎಂ. ಶಹೀದ್, ಬಿಜೆಪಿ ನಾಯಕರಾದ ಎ.ವಿ.ತೀರ್ಥರಾಮ, ಎಸ್.ಎನ್. ಮನ್ಮಥ, ಜೆಡಿಎಸ್ ನಾಯಕರಾದ ಎಂ.ಬಿ.ಸದಾಶಿವ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಚಿಂತಕ‌ ಗೋಪಾಲ್ ಪೆರಾಜೆ, ಸಂಘಟಕ ದಿನೇಶ್ ಮಡಪ್ಪಾಡಿ, ಡಾ. ಎನ್. ಎ. ಜ್ಞಾನೇಶ್ ಮೊದಲಾದವರು ಮಾತನಾಡಿದರು. ಹೋರಾಟಕ್ಕೆ ವಿವಿಧ ಸ್ತರಗಳಲ್ಲಿ‌ ಸಮಿತಿ ರಚನೆಗೆ ನಿರ್ಧರಿಸಲಾಯಿತು.‌ ಮುಖ್ಯ ಸಮಿತಿ ಸಂಚಾಲಕರಾಗಿ ಎಂ.ಡಿ.ವಿಜಯಕುಮಾರ್ ಅವರನ್ನು ಆರಿಸಲಾಯಿತು.