ಡಾ. ಚಂದ್ರಶೇಖರ ದಾಮ್ಲೆ ಯವರಿಗೆ ಕೆರೆಮನೆ ಶಂಭು ಹೆಗಡೆ ಸನ್ಮಾನ

0

ಯಕ್ಷಗಾನದ ಪ್ರಾತಸ್ಮರಣೀಯರಾದ ಕೆರೆಮನೆ ಶಂಭು ಹೆಗಡೆಯವರ ಸಂಸ್ಮರಣೆಯ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ತೆಂಕುತಿಟ್ಟು ಯಕ್ಷಗಾನದ ಸ್ವರೂಪ ರಕ್ಷಣೆಗಾಗಿ ಶ್ರಮಿಸಿದ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರಿಗೆ ಗುಣವಂತೆಯ ಯಕ್ಷಾಂಗಣದಲ್ಲಿ ಮಾ. 17 ರಂದು ನಡೆದ ಸಮಾರಂಭದಲ್ಲಿ “ಕೆರೆಮನೆ ಶಂಭು ಹೆಗಡೆ ಸನ್ಮಾನ”ವನ್ನು ನೀಡಿ ಗೌರವಿಸಿದರು. ಡಾ. ಎಂ. ಪ್ರಭಾಕರ ಜೋಷಿ, ಮಾರಣಕಟ್ಟೆ ಮೇಳದ ಯಜಮಾನರಾದ ಕೃಷ್ಣಮೂರ್ತಿ ಮಾಂಜಾ, ಕೆರೆಮನೆ ಶಿವಾನಂದ ಹೆಗಡೆ ಇವರ ಸಮಕ್ಷಮದಲ್ಲಿ ನಡೆದ ಈ ಸಮಾರಂಭದಲ್ಲಿ ಪ್ರೊ. ಎಂ. ಎಲ್. ಸಾಮಗರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ, ಕಂದಾವರ ರಘುರಾಮ ಶೆಟ್ಟಿ ಮತ್ತು ಐರೋಡಿ ಗೋವಿಂದಪ್ಪ ರಿಗೆ ಕೆರೆಮನೆ ಶಂಭು ಹೆಗಡೆ ಸನ್ಮಾನವನ್ನು ನೀಡಲಾಗಿದೆ.

ಸನ್ಮಾನಕ್ಕೆ ಉತ್ತರವಾಗಿ ಮಾತಾಡಿದ ಡಾ. ದಾಮ್ಲೆ ಯವರು ತಮ್ಮ ಕಾಲೇಜಿನ ಸಹಾಯರ್ಥವಾಗಿ ಇಡಗುಂಜಿ ಮೇಳದ ಮೂರು ಆಟಗಳನ್ನು ಆಡಿಸಿದ್ದು, ಲಂಕಾ ದಹನ ಪ್ರಸಂಗದಲ್ಲಿ ಶಂಭು ಹೆಗಡೆಯವರ ಹನುಮಂತನ ಎದುರು ತಾನು ರಾವಣನ ವೇಷ (ಬಡಗುತ್ತಿಟ್ಟು) ಮಾಡಿ ಯಶಸ್ಸು ಪಡೆದದ್ದು, ಸುಳ್ಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಹಿಮ್ಮೆಳ ಮತ್ತು ಅರ್ಥಗಾರಿಕೆ ಅಧ್ಯಯನ ಶಿಬಿರಗಳು, ಸ್ತ್ರೀವೇಷ ಮತ್ತು ಹಾಸ್ಯವೇಷಗಳ ಕುರಿತಾಗಿ ಪ್ರಾತ್ಯಕ್ಷಿಕೆಗಳು, ಬಲಿಪ ಪ್ರಶಸ್ತಿ ನೀಡಿದ್ದು, ಮಕ್ಕಳ ಮೇಳವನ್ನು ಹುಟ್ಟುಹಾಕಿ ಯಕ್ಷಗಾನವನ್ನು ಬೆಳೆಸಿದ್ದು, ಕಾಲೇಜು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ್ದು, ಸಂಪೂರ್ಣ ರಾಮಾಯಣ ಮತ್ತು ಸಂಪೂರ್ಣ ಮಹಾಭಾರತದ ಸರಣಿ ಪ್ರದರ್ಶನಗಳನ್ನು ಏರ್ಪಡಿಸಿದ ಅನುಭವಗಳನ್ನು ಹಂಚಿಕೊಂಡರು.
ಆರಂಭದಲ್ಲಿ ಗಜಮುಖದವಗೆ ಪ್ರಾರ್ಥನೆಯ ಬಳಿಕ ಲಕ್ಷ್ಮೀನಾರಾಯಣ ಕಾಶಿಯವರು ಸ್ವಾಗತಿಸಿದರು. ಜೋಶಿಯವರ ಅಧ್ಯಕ್ಷ ಭಾಷಣದ ಬಳಿಕ ಶಿವಾನಂದ ಹೆಗಡೆಯವರು ವಂದಿಸಿದರು. ಕೊನೆಯಲ್ಲಿ ಬೆಂಗಳೂರಿನ ಹೊಸಕೆರೆ ಅನುಪಮಾ ತಂಡದಿಂದ ಗೊಂಬೆಯಾಟ ಹಾಗೂ ಮುಖ್ಯಮಂತ್ರಿ ನಾಟಕ ಜರಗಿತು.