ಅರಂತೋಡು: ಬೈಕ್ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿ ಪತ್ತೆ, ನ್ಯಾಯಾಂಗ ಬಂಧನ

0

ಅರಂತೋಡು ಫುಡ್‌ಲ್ಯಾಂಡ್ ಹೊಟೇಲ್ ಗೆ ತನ್ನ ಸ್ನೇಹಿತನ ಬಳಿ ಕೆಲಸ ಕೇಳಿಕೊಂಡು ಬಂದು ಮೊಬೈಲ್ ಫೋನ್ ಮತ್ತು ಬೈಕ್ ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು ನ್ಯಾಯಾಲಯವು ಆರೋಪಿಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

ಘಟನೆ ಮಾರ್ಚ್ ೨೭ರಂದು ನಡೆದಿದ್ದು ಕಳವಾಗಿದ್ದ ಬೈಕಿನ ಮಾಲಕ ರಿಯಾಜ್ ಎಂಬವರು ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದರು.

ಸುಳ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿ ಆರೋಪಿ ಬೆಳ್ತಂಗಡಿ ತಾಲೂಕಿನ ಹಳೆಯಂಗಡಿ ನಿವಾಸಿ ಹರ್ಷಿಕೇಶ್ @ ಹಸುತೇಶ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆತನನ್ನು ಸುಳ್ಳಕ್ಕೆ ಕರೆತಂದು ವಿಚಾರಣೆ ನಡೆಸಿ ಆತ ಕಳ್ಳತನ ಮಾಡಿದ್ದ ಬಜಾಜ್ ಪ್ಲಾಟಿನ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಳಿಕ ಆತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆತನಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಆತ ಮೊಬೈಲ್ ಫೋನ್ ಕೂಡ ಕಳ್ಳತನ ಮಾಡಿದ್ದ ಎಂಬ ವಿಷಯಕ್ಕೆ ಸಂಬಂಧಿಸಿ,ಆತ ಫೋನ್ ಕೊಂಡು ಹೋಗಿರಲಿಲ್ಲ ಫೋನ್ ಸ್ವಿಚ್ ಆಫ್ ಮಾಡಿದ್ದ ಸ್ಥಿತಿಯಲ್ಲಿ ರಿಯಾಜ್ ರವರ ರೂಮಿನಲ್ಲಿಯೇ ಲಭಿಸಿತ್ತು ಎಂದು ತಿಳಿದು ಬಂದಿದೆ.
ಈತನನ್ನು ಬಂಧಿಸುವಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಈರಯ್ಯ ದೂಂತೂರು, ಸರಸ್ವತಿ, ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.