ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು

0

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಸಭೆ ನಡೆಸಿದ ಶಾಸಕರು ಪ್ರಸೂತಿ ತಜ್ಞ ವೈದ್ಯರಿಂದ ಕಿರುಕುಳ : ಶುಶ್ರೂಷಕಿಯರ ಆರೋಪ

ಸುಳ್ಯ ತಾಲೂಕು ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯರು ಇಂದು ಭೇಟಿ ನೀಡಿದರು. ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿದರು.
ಬಳಿಕ ಸಿಬ್ಬಂದಿಗಳ ಸಭೆ ನಡೆಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರರು ಪ್ರಸೂತಿ ತಜ್ಞೆರು ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆಂದು ಕೆ.ಆರ್.ಎಸ್. ಪಕ್ಷದವರು ಬಂದು ಪ್ರತಿಭಟಿಸಿದ ಹಾಗೂ ಸಿಬ್ಬಂದಿಗಳ ಕಡೆಯಿಂದ ಯಾವುದೇ ದೂರು ಬಂದಿರದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರಲ್ಲದೆ, ಈ ಕುರಿತು ಶಾಸಕರು ಸಿಬ್ಬಂದಿಗಳ ಅಹವಾಲು ಕೇಳಲು ಆಗಮಿಸಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ಶಾಸಕರು, ಎಲ್ಲ ಮನೆಯಲ್ಲಿಯೂ ಸಣ್ಣ ಪುಟ್ಟ ಗಟನೆಗಳು ಆಗುತ್ತದೆ. ನಾವು ಕೆಲಸ ಮಾಡುವ ಜಾಗವೂ ಅದೇ ರೀತಿ ಸಣ್ಣ ಸಣ್ಣ ವಿಷಯಗಳನ್ನು ನಾವೇ ಸರಿ ಪಡಿಸಿಕೊಳ್ಳಬೇಕು” ಎಂದು ಹೇಳಿದರು. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು ಮಾತನಾಡಿ ಖಾಸಗಿ ಆಸ್ಪತ್ರೆಗೆ ಸಮಾನವಾದ ಎಲ್ಲ ವ್ಯವಸ್ಥೆಗಳು ಇಲ್ಲಿ ಇದೆ. ಗುಣಮಟ್ಟದ ಚಿಕಿತ್ಸೆ ನೀಡುವ ವೈದ್ಯರೂ ಇಲ್ಲಿದ್ದಾರೆ. ಸಿಬ್ಬಂದಿಗಳ ದೂರುಗಳಿದ್ದರೆ ಅದನ್ನು ಆಡಳಿತಾಧಿಕಾರಿಗಳಿಗೆ ನೀಡಬೇಕು ಅದು ಹೊರತು ಯಾವುದೋ ಪಕ್ಷದವರಿಗೆ ನೀಡುವುದು, ಅವರು ಬಂದು ಪ್ರಶ್ನಿಸುವುದು ಇದೆಲ್ಲ ಸರಿಯಾದ ಕ್ರಮವಲ್ಲ ಎಂದು ಹೇಳಿದರು.


ಶಾಸಕರು ಸಮಸ್ಯೆ ಇದ್ದರೆ ತಿಳಿಸಿ ಎಂದು ಹೇಳಿದಾಗ, ಸಭೆಯಲ್ಲಿದ್ದ ಶುಶ್ರೂಷಕಿಯರು ಒಬ್ಬೊಬ್ಬರಾಗಿ ಆಸ್ಪತ್ರೆಯ ಪ್ರಸೂತಿ ತಜ್ಞರಿಂದ ಆಗಿರುವ ಸಮಸ್ಯೆಯ ಕುರಿತು ಹೇಳ ತೊಡಗಿದರು. ಕೆಲವರು ಸಮಸ್ಯೆ ಹೇಳಿ ಕಣ್ಣೀರಾದ ಘಟನೆಯೂ ನಡೆಯಿತು. ಕೆಲ ಸಮಯ ಸಮಸ್ಯೆ ಆಲಿಸಿದ ಶಾಸಕರು, ನಿಮ್ಮ ಮಾತುಗಳನ್ನು ಆಲಿಸಿzವೆ. ಅದೇ ರೀತಿ ವೈದ್ಯರಲ್ಲಿಯೂ ಮಾತನಾಡುತ್ತೇವೆ. ಹೊಂದಾಣಿಕೆಯಿಂದ ಹೋಗುವಂತೆ ತಿಳಿಸಲಾಗುವುದು. ಆಸ್ಪತ್ರೆಗೆ ಖಾಯಂ ತಜ್ಙರ ನೇಮಕಕ್ಕೆ ಸರಕಾರಕ್ಕೆ ಬರೆಯುತ್ತೇವೆ ಎಂದು ಹೇಳಿದರು.


ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ನ.ಪಂ. ಸದಸ್ಯ ಬುದ್ಧ ನಾಯ್ಕ, ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಕೇಶವ ಸಿ.ಎ., ಶಿವಪ್ರಸಾದ್ ನಡುತೋಟ, ಪ್ರಸಾದ್ ಕಾಟೂರು ಇದ್ದರು.