ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುವರ್ಣ ಮಹೋತ್ಸವ ಆಚರಿಸಿದ ಚೊಕ್ಕಾಡಿ ಪ್ರೌಢಶಾಲೆಗೆ ಸುವರ್ಣ ತಿಲಕವಿಟ್ಟಂತಾಗಿದೆ : ಎಸ್.ಅಂಗಾರ ಸಂತಸ

0

” 1973 ರಲ್ಲಿ ಕುಕ್ಕುಜಡ್ಕದಲ್ಲಿ ಸ್ಥಾಪಿಸಲ್ಪಟ್ಟ ಚೊಕ್ಕಾಡಿ ಪ್ರೌಢಶಾಲೆಯು 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ದಾಖಲಿಸಿದೆ. ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಶೇ.100% ಫಲಿತಾಂಶವನ್ನು ದಾಖಲಿಸಿತ್ತು. ತದ ನಂತರ ಈ ಬಾರಿ ಸುವರ್ಣ ಮಹೋತ್ಸವವನ್ನು ಸಂಭ್ರಮಿಸಿದ ಪ್ರಸ್ತುತ ವರ್ಷದಲ್ಲಿ ಮತ್ತೆ
ಶೇ.100% ಫಲಿತಾಂಶ ದಾಖಲಿಸಿರುವುದು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಸುವರ್ಣ ತಿಲಕವಿಟ್ಟಂತಾಗಿದೆ”
ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ , ಮಾಜಿ ಸಚಿವ ಎಸ್.ಅಂಗಾರ ರವರು ಹೇಳಿದ್ದಾರೆ.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ‌ಮೇ.25 ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

” ಶಾಲೆಯ 50 ರ ಮಹೋತ್ಸವದ ಸಂದರ್ಭದಲ್ಲಿ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲು ಪ್ರಥಮ ಆದ್ಯತೆ ನೀಡಲಾಗಿದೆ. ಶಿಕ್ಷಣದ ಜತೆಗೆ ಸಂಸ್ಕಾರದ ಬೋಧನೆಯನ್ನು ನೀಡಲಾಗುತ್ತಿದೆ.
ಸುವರ್ಣ ಮಹೋತ್ಸವದ ಪೂರ್ವ ಸಿದ್ದತೆಯ ಸಂದರ್ಭದಲ್ಲಿ ಪಾಠ ಪ್ರವಚನಗಳಿಗೆ ಸಮಯದ ಕೊರತೆಯಾದರೂ ಶಿಕ್ಷಕರ ಶತಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ.


ಕನ್ನಡ ಮಾಧ್ಯಮದ 8 ಮತ್ತು 9 ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಸರಕಾರದ ಶುಲ್ಕ 720/- ಹೊರತು ಪಡಿಸಿ ಯಾವುದೇ ಫೀಸ್ ಪಾವತಿಸಬೇಕಾಗಿಲ್ಲ.
1ರಿಂದ 8 ನೆಯ ವರೆಗೆ ಗ್ರಾಮೀಣ ಭಾಗದ ಮಕ್ಕಳ ಅನುಕೂಲಕ್ಕಾಗಿ ಇಂಗ್ಲೀಷ್ ಮೀಡಿಯಂ ತರಗತಿಗಳಿಗೆ ದಾಖಲಾತಿಯು ಆರಂಭಗೊಂಡಿದೆ. ಪೋಷಕರ ಸಹಕಾರ ಸಹಭಾಗಿತ್ವ ಯಶಸ್ಸಿಗೆ ಕಾರಣವಾಯಿತು” ಎಂದು ಅವರು ತಿಳಿಸಿದರು.

” ಅವಳಿ ಗ್ರಾಮದಲ್ಲಿರುವ ಮಕ್ಕಳಿಗೆ ಶಿಕ್ಷಣದ ಕೊರತೆಯಾಗಬಾರದೆಂಬ ಉದ್ದೇಶದಿಂದ ಸಕಲ ವ್ಯವಸ್ಥೆ ಹೊಂದಿರುವ ಶಾಲೆಯ ನಿರ್ಮಾಣವಾಗಿದೆ. ಗ್ರಾಮದ ಪೋಷಕರು ಹಾಗೂ ವಿದ್ಯಾಭಿಮಾನಿಗಳು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸುವ ಮೂಲಕ ಕೈಜೋಡಿಸುವಂತೆ ಪತ್ರಿಕಾಗೋಷ್ಠಿಯಲ್ಲಿದ್ದ ಶಾಲಾ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ವಿನಂತಿಸಿದರು.

” ಪ್ರಸ್ತುತ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ 28 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 7 ಮಂದಿ ವಿಶಿಷ್ಟ ಶ್ರೇಣಿ, 12 ಮಂದಿ ಪ್ರಥಮ ಶ್ರೇಣಿ, 5 ಮಂದಿ ದ್ವಿತೀಯ, 4 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರೊಂದಿಗೆ ದಾಖಲೆಯ ಫಲಿತಾಂಶ ಬಂದಿರುವುದು ಸಂತಸವಾಗಿದೆ” ಎಂದು ಶಾಲಾ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕ ಸತ್ಯಪ್ರಸಾದ್ ಪುಳಿಮಾರಡ್ಕ ಉಪಸ್ಥಿತರಿದ್ದರು.