ಬಸ್ ನಲ್ಲಿ ತೆರಳುವವರ ಊಟದ ಖರ್ಚು ಪಿ.ಡಿ.ಒ.ಗಳ ತಲೆಗೆ ಬೀಳುವ ಸಂಭವ
ಮಂಗಳೂರಿನ ಪಡೀಲ್ ನಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಜಾ ಸೌಧದ ಉದ್ಘಾಟನೆ ಇಂದು ಅಪರಾಹ್ನ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಮಾರಂಭಕ್ಕೆ ಸುಳ್ಯದಿಂದ ತೆರಳುವವರಿಗೆ 19 ಬಸ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಆದರೆ ಬಸ್ಸಲ್ಲಿ ಸುಳ್ಯದಿಂದ ಹೋಗುವ ಜನರಿಗೆ ಊಟದ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಪಿ.ಡಿ.ಒ. ಗಳು ಮಾಡಬೇಕೆಂದು ತಹಶೀಲ್ದಾರ್ ಹೇಳಿರುವುದರಿಂದ ಒಂದೊಂದು ಬಸ್ಸಲ್ಲಿ ಹೋಗುವ ತಲಾ 50 ಜನರ ಊಟದ ಖರ್ಚು ಮೇಲ್ವಿಚಾರಕರಾದ ಪಿ.ಡಿ.ಒ.ಗಳ ತಲೆಗೆ ಬೀಳುವ ಲಕ್ಷಣ ಕಂಡುಬಂದಿದೆ. ಇದರಿಂದಾಗಿ ಪಿ.ಡಿ.ಒ. ಗಳು ಚಿಂತಾಕ್ರಾಂತರಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಸುಳ್ಯ ತಹಶೀಲ್ದಾರ್ ಮಂಜುಳಾ ಹಾಗೂ ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣರವರ ಉಸ್ತುವಾರಿಯಲ್ಲಿ ಮೇಲ್ವಿಚಾರಕರ (ಪಿ.ಡಿ.ಒ.) ಗಳ ಗೂಗಲ್ ಮೀಟ್ ನಡೆದು ಕಾರ್ಯಕ್ರಮ ಸಿದ್ಧತೆಯ ಕುರಿತು ಚರ್ಚೆಗಳು ನಡೆದವು.









ಮಧ್ಯಾಹ್ನ ಸುಳ್ಯದಿಂದ ಹೋಗುವುದರಿಂದ ಬಸ್ ನಲ್ಲಿ ತೆರಳುವ ಫಲಾನುಭವಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ ಎಂಬ ವಿಚಾರ ಚರ್ಚೆ ನಡೆದಾಗ ” ಅದನ್ನು ಈಗ ನೇಮಿಸಿರುವ ಆಯಾ ರೂಟ್ ನ ಮೇಲ್ವಿಚಾರಕರು (ಪಿಡಿಒಗಳು) ಈಗ ಭರಿಸಬೇಕು. ಈಗಾಗಲೇ ಜಿಲ್ಲೆಗೆ ಬರೆಯಲಾಗಿದ್ದು , ಅಲ್ಲಿಂದ ಹಣ ಬಂದ ಬಳಿಕ ರೀಫಂಡ್ ಮಾಡಲಾಗುವುದು” ಎಂದು ತಹಶೀಲ್ದಾರ್ ಹೇಳಿದರು.
ಆಗ ಗೂಗಲ್ ಮೀಟ್ ನಲ್ಲಿ ಭಾಗವಹಿಸಿದ್ದವರಲ್ಲಿ ಕೆಲವು ಪಿಡಿಒ ಗಳು ” ಅಷ್ಟು ದುಡ್ಡನ್ನು ಭರಿಸುವುದು ಕಷ್ಟಸಾಧ್ಯ. ತಾಲೂಕು ಹೆಡ್ ಕ್ವಾರ್ಟರ್ಸ್ ನಿಂದಲೇ ಫುಡ್ ವ್ಯವಸ್ಥೆ ಮಾಡಿ ” ಎಂದು ಹೇಳಿದರೆಂದೂ, ” ಆದರೆ ಇದು ಅಸಾಧ್ಯ. ಸ್ಥಳೀಯವಾಗಿ ಮಾಡಬೇಕೆಂದು ಮೇಲ್ವಿಚಾರಕರಿಗೆ ತಹಶೀಲ್ದಾರ್ ಸೂಚನೆ ನೀಡಿದರೆಂದೂ ತಿಳಿದುಬಂದಿದೆ.
” ಒಂದೊಂದು ಬಸ್ಸಲ್ಲಿ 50 ಜನರು ಹೋಗುವ ವ್ಯವಸ್ಥೆ ಆಗಿದೆ. 50 ಜನರಿಗೆ ಕನಿಷ್ಟವೆಂದರೂ 5000 ರೂ. ಆಗುತ್ತದೆ. ಡಿ.ಸಿ.ಕಚೇರಿಯಿಂದ ಹಣ ಬಂದರೆ ಆದೀತು. ಬಾರದಿದ್ದರೆ ನಾವು ಹಾಕಿದ ಹಣ ನಾಮವಾದೀತು ಎಂದು ಪಿ.ಡಿ.ಒ.ಗಳು ಚಿಂತೆಗೊಳಗಾಗಿದ್ದಾರೆಂದು ಗೊತ್ತಾಗಿದೆ. ಬಸ್ ಗಳಿಗೆ ಕಟ್ಟುವ ಬ್ಯಾನರ್ ವ್ಯವಸ್ಥೆಯನ್ನೂ ಪಿ.ಡಿ.ಒ.ಗಳೇ ಮಾಡಬೇಕೆಂದು ತಹಶೀಲ್ದಾರ್ ಹಾಗೂ ಇ.ಒ. ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.
ತಹಶೀಲ್ದಾರ್, ಇ.ಒ. ಜತೆ ಬೊಳ್ಳೂರು ಮಾತುಕತೆ
ಮಂಗಳೂರಿನ ಕಾರ್ಯಕ್ರಮದಲ್ಲಿ ಬಸ್ ನಲ್ಲಿ ಹೋಗುವವರ ಊಟದ ಖರ್ಚನ್ನು ಮೇಲ್ವಿಚಾರಕರು ಭರಿಸಬೇಕೆಂದು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ದೊರೆತ ತಾ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ರಾಧಾಕೃಷ್ಣ ಬೊಳ್ಳೂರು ರವರಿಗೆ ತಿಳಿದು, ಅವರು ತಾಲೂಕು ಕಚೇರಿಗೆ ಹೋಗಿ ತಹಶೀಲ್ದಾರ್ ಜತೆ ಹಾಗೂ ತಾ.ಪಂ. ನಲ್ಲಿ ಇ.ಒ.ಜತೆ ಪ್ರತ್ಯೇಕ ವಾಗಿ ಚರ್ಚೆ ನಡೆಸಿದರು. ಪಿಡಿಒ ಗಳನ್ನು ಮೇಲ್ವಿಚಾರಕರಾಗಿ ನೇಮಿಸಲಾಗಿದೆ. ಊಟದ ಖರ್ಚು ಅವರೇ ಸ್ಥಳೀಯವಾಗಿ ಭರಿಸಬೇಕೆಂದು ಎಂದರೆ ಸಾಧ್ಯವಿಲ್ಲ. ಪಂಚಾಯತ್ ಸ್ವಂತ ನಿಧಿಯಿಂದ ಭರಿಸಲು ಅವಕಾಶ ಇದೆ. ತಾವು ಸುತ್ತೋಲೆ ಹೊರಡಿಸಿ ಎಂದು ವಿನಂತಿಸಿಕೊಂಡರೆಂದು ತಿಳಿದು ಬಂದಿದೆ. ರಾಧಾಕೃಷ್ಣ ಬೊಳ್ಳೂರು ರವರ ಮಾತಿಗೆ ತಹಶೀಲ್ದಾರ್ ಹಾಗೂ ಇ.ಒ. ಒಪ್ಪಿದರೆನ್ನಲಾಗಿದೆ.
ಆದರೆ ಪಂಚಾಯತ್ ಸ್ವಂತ ನಿಧಿಯಿಂದ ಬಳಸಲು ಇದುವರೆಗೆ ಯಾವುದೇ ಸುತ್ತೋಲೆ ಪಂಚಾಯತ್ ಗಳಿಗೆ ಹೋಗಿಲ್ಲವೆಂದು ತಿಳಿದುಬಂದಿದೆ. ಬದಲಾಗಿ ಸ್ಥಳೀಯವಾಗಿ ಭರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.










