ವಿವಿಧ ಬಗೆಯ ಹಣ್ಣಿನ ಗಿಡಗಳು,ತರಕಾರಿ ಬೀಜ ವಿತರಣೆ
“ಮಳೆಗಾಲದಲ್ಲಿ ಪ್ರಮುಖವಾಗಿ ಅಡಿಕೆ ತೋಟದಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕು. ಮಣ್ಣು ಪರೀಕ್ಷಿಸಿ ಅದಕ್ಕೆ ಪೂರಕವಾಗಿ ತೋಟಕ್ಕೆ ಗೊಬ್ಬರ ಹಾಕಬೇಕು” ಎಂದು ಸುಳ್ಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ ಹೇಳಿದರು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯತ್ ಐವರ್ನಾಡು ಮತ್ತು ತೋಟಗಾರಿಕಾ ಇಲಾಖೆ ಸುಳ್ಯ ಸಹಭಾಗಿತ್ವದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಘದ ಸಭಾಭವನದಲ್ಲಿ ನಡೆದ ಅಡಿಕೆ ವೈಜ್ಞಾನಿಕ ಬೇಸಾಯ ಮತ್ತು ಇಲಾಖಾ ಯೋಜನೆ ಮಾಹಿತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಳೆಗಾಲದಲ್ಲಿ ಅಡಿಕೆ ತೋಟದಲ್ಲಿ ನೀರು ನಿಲ್ಲುವುದರಿಂದ ಕೃಷಿಗೆ ಕೊಳೆ ರೋಗ ಬಾಧಿಸುತ್ತದೆ. ಆದ್ದರಿಂದ ತೋಟದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಜೊತೆಗೆ ತೋಟಕ್ಕೆ ಗೊಬ್ಬರ ಹಾಕುವಾಗ ತೋಟದ ಮಣ್ಣಿನ ಪರೀಕ್ಷೆ ನಡೆಸಿ, ಅದಕ್ಕೆ ಪೂರಕವಾದ ಗೊಬ್ಬರ ಹಾಕಿದಾಗ ಉತ್ತಮ ಫಸಲು ಪಡೆಯಲು ಸಾಧ್ಯವಿದೆ. ಮಳೆ ಕಡಿಮೆ ಆದ ಬಳಿಕ ಗೊಬ್ಬರ ಹಾಕಬೇಕು ಎಂದರು. ಅಡಿಕೆಗೆ ಔಷಧಿ ಸಿಂಪಡನೆ ವೇಳೆ ಅಡಿಕೆ ಕೃಷಿ ಜೊತೆಗಿರುವ ಕಾಳುಮೆಣಸು, ಕೊಕ್ಕೋ ಕೃಷಿಗೂ ಔಷಧಿ ಸಿಂಪಡಿಸಬೇಕು ಎಂದರು.









ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಮನ್ಮಥ ಎಸ್.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವಮಾನ ಆಧರಿತ ಬೆಳೆ ವಿಮೆಯಲ್ಲಿ ನಮ್ಮ ಐವರ್ನಾಡಿನವರಿಗೆ ಬೇರೆ ಗ್ರಾಮಕ್ಕೆ ಹೋಲಿಸಿದರೆ ಕಡಿಮೆ ಹಣ ಸಿಗುತ್ತಿತ್ತು, ಈ ಸಮಸ್ಯೆ ಪರಿಹರಿಸುವಂತೆ ನಾವು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದೆವು. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮುಂದಿನ ದಿನಗಳಲ್ಲಿ ನಮಗೂ ಸಮರ್ಪಕ ಪರಿಹಾರ ಲಭ್ಯವಾಗುವ ವಿಶ್ವಾಸ ಇದೆ ಎಂದ ಅವರು ಇಂದು ಹಮ್ಮಿಕೊಂಡ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡು ವೈಜ್ಞಾನಿಕ ಬೇಸಾಯದ ಮೂಲಕ ಉತ್ತಮ ಫಸಲು ಪಡೆಯಲು ಪೂರಕವಾಗಲಿ ಎಂದರು.
ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ಕಾರ್ಯಗಾರ ಉದ್ಘಾಟಿಸಿದರು. ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೀನಪ್ಪ ಗೌಡ ಎನ್., ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ನಿವೃತ್ತ ಮುಖ್ಯ ಪ್ರಬಂದಕ ಜಗದೀಶ್ ಪಡ್ಡಂಬೈಲು, ಸೊಸೈಟಿ ಮೇಲ್ವಿಚಾರಕ ರತನ್, ಸಂಚಾಲಕ ರಾಜೇಂದ್ರ ಪಾತಿಕಲ್ಲು ಪ್ರಗತಿಪರ ಕೃಷಿಕ ಕರುಣಾಕರ ಆಕ್ರಿಕಟ್ಟೆ, ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸೊಸೈಟಿ ಉಪಾಧ್ಯಕ್ಷ ಮಹೇಶ ಜಬಳೆ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಸತೀಶ್ ಎಡಮಲೆ ಸ್ವಾಗತಿಸಿದರು. ಸಿಇಒ ದೀಕ್ಷಿತ್ ವಂದಿಸಿದರು. ಸಿಬ್ಬಂದಿ ಅಜಿತ್ ಕಾರ್ಯಕ್ರಮ ನಿರೂಪಿಸಿದರು.
ಮಾಹಿತಿ ಕಾರ್ಯಗಾರ
ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬನ್ ಪೂಜಾರ್ ಅವರು ಕೀಟನಾಶಕ ಮತ್ತು ರೋಗ ನಿರ್ವಾಹಣೆ ಬಗ್ಗೆ, ಪ್ರಗತಿಪರ ಕೃಷಿಕರಾದ ಸುಬ್ರಾಯ ಪಿಲಿಕಜೆ ಅವರು ಕಾಳುಮೆಣಸು ಕೃಷಿ ಬಗ್ಗೆ, ಭಾಸ್ಕರ ನಾಯರ್ ಅರಂಬೂರು ಜಾಯಿಕಾಯಿ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ೩೦೦ಕ್ಕೂ ಅಧಿಕ ಹಣ್ಣಿನ ಮತ್ತು ಕಾಡುತ್ಪತ್ತಿ ಗಿಡಗಳನ್ನು ವಿತರಿಸಲಾಯಿತು. ತರಕಾರಿ ಬೀಜಗಳನ್ನೂ ವಿತರಿಸಲಾಯಿತು.










