ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

0

ಮಾಸ್ಟರ್ ಪ್ಲಾನ್ ಸಮಿತಿ ಸಭೆ; ಅಭಿವೃದ್ಧಿ ಕುರಿತು ಚರ್ಚೆ

ನೂತನ ಆಶ್ಲೇಷ ಮಂದಿರಕ್ಕೆ ಶಂಕುಸ್ಥಾಪನೆ ಬದಲು ನಾಮ ಫಲಕ ಅನಾವರಣ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಇಂದು ಭೇಟಿ ನೀಡಿದರು.

ಇಂದು ನಡೆಯಲಿದ್ದ ಆಶ್ಲೇಷ ಮಂದಿರದ ಶಂಕು ಸ್ಥಾಪನೆ ಬದಲು ಆಡಳಿತ ಕಚೇರಿ ಬಳಿ ನಾಮಫಲಕ ಅನಾವರಣ ನಡೆಯಿತು. ಮಾಸ್ಟರ್ ಪ್ಲಾನ್ ಸಮಿತಿ ಸಭೆಯೂ ನಡೆಯಿತು.

ಆರಂಭದಲ್ಲಿ ದೇಗುಲ ದರ್ಶನ ಮಾಡಿದ ಸಚಿವರು ಬಳಿಕ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಶ್ಲೇಷ ಮಂದಿರದ ದಾನಿಗಳಾದ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಪರವಾಗಿ ಅವರ ಅಳಿಯ ಜೈ ಪುನೀತ್ ಅವರಿಗೆ ಆದೇಶ ಪತ್ರ ನೀಡಿದರಲ್ಲದೆ ದೇವಸ್ಥಾನದ ಪರವಾಗಿ ಅವರನ್ನು ಸನ್ಮಾನಿಸಿದರು.

ಬಳಿಕ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವರು ನಂತರ ಆಡಳಿತ ಕಛೇರಿ ಮುಂಭಾಗಕ್ಕೆ ಬಂದರು. ಅಲ್ಲಿ ಜೈ ಪುನೀತ್ ಅವರು ನಾಮ ಫಲಕ ಅನಾವರಣಗೊಳಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಡಾ. ಕೆ.ವಿ.ವೆಂಕಟೇಶ್ , ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,
ಆಶ್ಲೇಷ ಮಂದಿರ ದಾನಿಗಳ ಪರವಾಗಿ ಜೈ ಪುನೀತ್,
ದೇಗುಲದ ಕಾರ್ಯನಿರ್ವಹಣಾಧಿಕಾರಿ
ಅರವಿಂದ ಅಯ್ಯಪ್ಪ ಸುತಗುಂಡಿ ,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಮಹೇಶ್ ಕುಮಾರ್ ಕರಿಕ್ಕಳ, ಶ್ರೀಮತಿ ಸೌಮ್ಯ ಬಿ.ಕೆ., ಶ್ರೀಮತಿ ಪ್ರವೀಣ ಪಿ., ಶ್ರೀಮತಿ ಲೀಲಾ ಮನಮೋಹನ್‌, ಅಜಿತ್ ಕುಮಾರ್, ಡಾ।ಬಿ. ರಘು,
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ,
ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ. ಸುಬ್ರಹ್ಮಣ್ಯ, ಲೋಲಾಕ್ಷ ಕೈಕಂಬ, ಅಚ್ಚುತ ಗೌಡ ಅಲ್ಕಬೆ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್, ಸುಬ್ರಹ್ಮಣ್ಯ ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಮೊದಲಾದವರಿದ್ದರು.

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುತ್ತೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪಿ.ಸಿ.ಜಯರಾಂ, ಅಭಿಲಾಶ್ ಪಿ.ಕೆ. , ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಶಂಕುಸ್ಥಾಪನೆ ಬದಲು ನಾಮಫಲಕ ಲೋಕಾರ್ಪಣೆ

ಆಶ್ಲೇಷ ಮಂದಿರದ ಶಂಕು ಸ್ಥಾಪನೆಗೆ ತುಳಸಿ ತೋಟದಲ್ಲಿ ಪೂರ್ಣ ಸಿದ್ಧತೆ ನಡೆಸಲಾಗಿತ್ತು. ನಾಮ ಫಲಕವನ್ನು ಇರಿಸಲಾಗಿತ್ತು. ಭೂಮಿ ಪೂಜೆಯನ್ನೂ ನಡೆಸಲಾಗಿತ್ತು. ಆದರೆ ಇಂದು ಅಲ್ಲಿ ಸಚಿವರಿಂದ ಶಂಕು ಸ್ಥಾಪನೆ ನಡೆಯಲಿಲ್ಲ. ನಾಮಫಲಕವನ್ನು ಆಡಳಿತ ಕಚೇರಿಗೆ ಸ್ಥಳಾಂತರಿಸಿ ಅಲ್ಲಿ ಅನಾವರಣ ಮಾತ್ರ ಮಾಡಲಾಯಿತು.

ನಿತ್ಯಾನಂದ ಮುಂಡೋಡಿಯವರ ಅಧ್ಯಕ್ಷತೆಯ ಸಮಿತಿ ಇರುವಾಗ ಆಶ್ಲೇಷ ಮಂದಿರದ ಜಾಗದ ಕುರಿತು ಚರ್ಚೆ ನಡೆದು ತುಳಸಿ ತೋಟದಲ್ಲಿ ನಿರ್ಮಿಸುವುದೆಂದು ಪ್ಲಾನಿಂಗ್ ತಯಾರಿಸಲಾಗಿತ್ತೆನ್ನಲಾಗಿದೆ. ಬಳಿಕ ಬಂದ ಮೋಹನ್ ರಾಮ್ ಸುಳ್ಳಿಯವರ ಅಧ್ಯಕ್ಷತೆಯ ಸಮಿತಿಯ ಸಂದರ್ಭ ಈ ಸೇವೆಗೆ ದಾನಿಗಳೂ ದೊರಕಿತ್ತು. ಆದರೆ ನಿರ್ಮಾಣದ ಸ್ಥಳವನ್ನು ಭೋಜನಶಾಲೆಯ ಹಿಂಭಾಗದಲ್ಲಿ ನಿಗದಿಗೊಳಿಸಿ ಮಾಲೂರು ಕೃಷ್ಣಯ್ಯ ಶೆಟ್ಟಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ದೇಗುಲದ ಪ್ರಧಾನ ಅರ್ಚಕರು ಸಚಿವರನ್ನು ಸಂಪರ್ಕಿಸಿ ಇವತ್ತು ತುಳಸಿ ತೋಟದಲ್ಲಿ ಶಂಕುಸ್ಥಾಪನೆ ನಡೆಸುವುದಿದ್ದರೆ ಪ್ರಾಯಶ್ಚಿತ್ತ ನಡೆಸಬೇಕೆಂದು ತಿಳಿಸಿದರೆಂದು ಹೇಳಲಾಗುತ್ತಿದೆ. ಹಾಗಾಗಿ ಹಿಂದೆ ಒಮ್ಮೆ ಮಂದಿರಕ್ಕೆ ಶಂಕುಸ್ಥಾಪನೆ ಮಾಡಲಾಗಿರುವುದರಿಂದ ಎರಡನೇ ಬಾರಿ ಶಂಕುಸ್ಥಾಪನೆ ಮಾಡದೆ ನಾಮಫಲಕ ಅನಾವರಣ ಮಾತ್ರ ಮಾಡಲು ಸಚಿವರು ನಿರ್ಧರಿಸಿದರೆಂದು ತಿಳಿದುಬಂದಿದೆ.

ಆದರೆ ಸಮಾರಂಭದ ಕೊನೆಯಲ್ಲಿ ತುಳಸಿ ತೋಟಕ್ಕೆ ತೆರಳಿದ ಕಮೀಷನರ್ ಅಲ್ಲಿ ಕಲ್ಲಿಗೆ ತೆಂಗಿನಕಾಯಿ ಒಡೆದರು. ಆ ಬಳಿಕ ಸಚಿವರೂ ಕೂಡಾ ಅಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.