ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ. ಯವರು ಜು.೩೧ರಂದು ಸೇವೆಯಿಂದ ನಿವೃತ್ತಿ ಹೊಂದಿದರು.
ಏನೆಕಲ್ಲು ಗ್ರಾಮದ ಚಿದ್ಗಲ್ ದಿ.ಬಾಲಣ್ಣ ಗೌಡ – ದಿ. ಕುಂಞಮ್ಮ ದಂಪತಿಗಳ ಪುತ್ರಿಯಾಗಿರುವ ಪ್ರೇಮಾವತಿಯವರು ವಿದ್ಯಾಭ್ಯಾಸದ ಬಳಿಕ ಏನೆಕಲ್ಲು ಪ್ರಾಥಮಿಕ ಶಾಲೆಯಲ್ಲಿ ೨ ವರ್ಷ ಹಾಗೂ ಕನ್ನಡ ಪೆರಾಜೆಯಲ್ಲಿ ಒಂದು ವರ್ಷ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೭ರಲ್ಲಿ ಸರಕಾರಿ ಸೇವೆಗೆ ನಿಯುಕ್ತಿಗೊಂಡ ಇವರು ಆರಂಭದಲ್ಲಿ ಸುಬ್ರಹ್ಮಣ್ಯ ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಅಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ ಬಳಿಕ, ನಾರ್ಣಕಜೆ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡರು. ಇಲ್ಲಿ ೫ ವರ್ಷ ಶಿಕ್ಷಕರಾಗಿದ್ದರು. ಬಳಿಕ ಸೋಣಂಗೇರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಅಲ್ಲಿ ೧೦ ವರ್ಷ ಸೇವೆ ಸಲ್ಲಿಸಿದರು. ೨೦೧೫ರಲ್ಲಿ ಸುಳ್ಯ ಮಾದರಿ ಶಾಲೆಗೆ ಶಿಕ್ಷಕರಾಗಿ ಬಂದ ಇವರು ಇಲ್ಲಿ ಸುಮಾರು ೧೦ ವರ್ಷ ಸೇವೆ ಸಲ್ಲಿಸಿ ಜು.೩೧ರಂದು ಸೇವಾ ನಿವೃತ್ತಿ ಹೊಂದಿದರು.









ಕ್ರೀಡಾಪಟುವಾಗಿರುವ ಪ್ರೇಮಾವತಿಯವರು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿಯಾಗಿ ಕರ್ನಾಟಕ ರಾಜ್ಯ ತಂಡದ ಉಪ ನಾಯಕಿಯಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಸರಕಾರಿ ನೌಕರರ ಸಂಘದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೂರು ಬಾರಿ ತ್ರೋಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.
ಪಠ್ಯದ ಜತೆಗೆ ಮಕ್ಕಳಿಗೆ ಕ್ರೀಡೆಯ ತರಬೇತಿ ನೀಡಿ, ಕ್ರೀಡಾ ಕೂಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ. ಸೇವಾದಳದ ತರಬೇತಿ ಪಡೆದು ಸೇವಾದಳದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ತಾಲೂಕು ಮಟ್ಟದ ರ್‍ಯಾಲಿಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.
ಪ್ರೇಮಾವತಿಯವರು ಸುಳ್ಯ ಎಂ.ಜಿ.ಎಂ. ಶಾಲಾ ಸಂಚಾಲಕ, ಲಗೋರಿ ಅಸೋಸಿಯೇಶನ್ ಭಾರತ ಇದರ ಅಧ್ಯಕ್ಷರಾಗಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲುರವರ ಪತ್ನಿ. ಪುತ್ರ ಗುರುದೇವ್ ಪ್ರೀತಮ್ ಎಂ.ಬಿ.ಎ. ಪದವೀಧರರಾಗಿದ್ದು ಜೆಪಿ ಮೊರ್ಗನ್ ಅಮೇರಿಕದ ಕಂಪೆನಿಯೊಂದರಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಸೊಸೆ ಸುಶ್ಮಿತಾ ಗುರುದೇವ್ ಪ್ರೀತಮ್ ಇಂಜಿನಿಯರ್ ಆಗಿ ಟಿಇ ಕನೆಕ್ಟಿವಿಟಿ ಪ್ರೈ. ಲಿಮಿಟೆಡ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಗಳು ಮನಸ್ವಿ ಬಿ.ಡಿ. ಎಂ.ಎಸ್.ಡಬ್ಲ್ಯೂ ಪದವೀಧರೆ.










