ಪೆರಾಜೆಯಲ್ಲಿ ಪಾಣತ್ತೂರು -ಪೆರಾಜೆ ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ನೂತನ ರಾಷ್ಟ್ರೀಯ ರಸ್ತೆ ಕಾರಿಡಾರ್ ಯೋಜನೆಯ ಬಗ್ಗೆ ಪೂರ್ವಭಾವಿ ಸಭೆ

0

ಗ್ರಾಮಕ್ಕೊಂದು ಸಂಪರ್ಕ ಸೇತುವೆಯಾಗಿ ಸುಸಜ್ಜಿತ ರಸ್ತೆಯೊಂದಿದ್ದರೆ ಊರು ಅಭಿವೃದ್ಧಿ ಹೊಂದಲು ಸಾಧ್ಯ : ಸೂರ್ಯನಾರಾಯಣ ಭಟ್

ದೇಶದ ಪ್ರತಿಯೊಂದು ಭಾಗದ ಹಳ್ಳಿಗಳ ಸರ್ವತೋಮುಖ ಏಳಿಗೆಗೆ ಮೂಲ ಆಧಾರವಾಗಿ ಸಮರ್ಪಕ ರಸ್ತೆಗಳ ನಿರ್ಮಾಣ ಕಾರ್ಯ ಪ್ರಮುಖವಾಗಿರುತ್ತದೆ. ಹಾಗಾಗಿ ಊರುಗಳಲ್ಲಿ ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅಭಿಪ್ರಾಯ ಪಟ್ಟರು.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾ ಭವನದಲ್ಲಿ ಸೆ. 1 ರಂದು ನಡೆದ ಪಾಣತ್ತೂರು -ಪೆರಾಜೆ ಅಂತರಾಜ್ಯ ಸಂಪರ್ಕ ಕಲ್ಪಿಸುವ ನೂತನ ರಾಷ್ಟ್ರೀಯ ರಸ್ತೆ ಕಾರಿ ಡಾರ್ ಯೋಜನೆಯ ಅಂಗವಾಗಿ ಪೆರಾಜೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇರಳ ರಾಜ್ಯದ ಪಾಣತ್ತೂರು, ಕಲ್ಲಪಳ್ಳಿ, ಬಡ್ಡಡ್ಕ, ಕೂರ್ನಡ್ಕ, ಕುಂದಲ್ಪಾಡಿ, ಕುಂಬಳಚೇರಿ ಮಾರ್ಗವಾಗಿ ಪೆರಾಜೆ ಗ್ರಾಮದ ಕಾಸ್ಪಾಡಿ ಎನ್ನುವಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಗೆ ಸೇರಿಸುವ ನೂತನ ರಸ್ತೆ ಯೋಜನೆಗೆ ಸಾರ್ವಜನಿಕರ ಬೆಂಬಲವಿದ್ದಲ್ಲಿ ಮುಂದೆಗೆ ದ್ವಿಪಥ ರಸ್ತೆ ಕೊಡಗು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ಕಾಣಲಿದೆ. ಅಲ್ಲದೇ ಪೆರಾಜೆ ಶಾಸ್ತಾವು ದೇವಸ್ಥಾನ, ಸುಳ್ಯ ಸೀಮೆ ದೇವಾಲಯ ತೊಡಿಕಾನ ಮಲ್ಲಿಕಾರ್ಜುನ, ಸುಬ್ರಹ್ಮಣ್ಯ, ತಲಕಾವೇರಿ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಪಾಣ ತ್ತೂರುನಿಂದ ಕರಿಕೆ ಭಾಗವಾಗಿ ಮಡಿಕೇರಿಗೆ ಸುತ್ತುಬಳಸಿ ಪ್ರಯಾಣಿಸುವ ಪ್ರಯಾಣದಲ್ಲಿ 9 ಕಿ. ಮೀ ದೂರ ಹತ್ತಿರವಾಗಿ ಇಂಧನ, ಸಮಯದ ಉಳಿತಾಯ ಆಗಲಿದೆ. ಹಾಗಾಗಿ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಲೆನಾಡು ಜಂಟಿ ಕ್ರಿಯಾ ಸಮಿತಿ ವ್ಯವಹರಿಸಲಿದೆ. 15 ಮೀಟರ್ ಅಗಲದ ಮೇಲ್ದರ್ಜೆಗೆ ಏರಿಸುವ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಲಿದೆ ಎಂದು ಹೇಳಿದರು.

ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ, ಉದ್ದೇಶಿತ ರಸ್ತೆ ರಬ್ಬರ್ ಕೃಷಿ ಇರುವ ನನ್ನ ಪಟ್ಟಾ ಭೂಮಿಯಲ್ಲಿ ಹಾದು ಹೋಗಲಿದ್ದು ಸುಮಾರು,150 ರಷ್ಟು ಟ್ಯಾಪಿಂಗ್ ಮಾಡುವ ಮರಗಳು ನಷ್ಟವಾಗಲಿದೆ. ಸಮಾಜದ ಅಭಿವೃದ್ಧಿಗೋಸ್ಕರ ಭೂಮಿ ಬಿಟ್ಟುಕೊಡುವ ಆಶ್ವಾಸನೆ ನೀಡಿದರು. ಅಲ್ಲದೇ ಇನ್ನುಳಿದ ಗ್ರಾಮಸ್ಥರು ಭೂಮಿ ಬಿಟ್ಟುಕೊಟ್ಟು ಗ್ರಾಮದ ಏಳಿಗೆಗೆ ಕೈ ಜೋಡಿಸಬೇಕೆಂದು ಕೋರಿಕೊಂಡರು.
ನಂತರ ರಸ್ತೆ ಹಾದು ಹೋಗುವ ಭೂ ಮಾಲೀಕರು ತಮ್ಮ ಅನಿಸಿಕೆ ಸಭೆಯ ಮುಂದೆ ತಂದ ಪ್ರಕಾರ ರಸ್ತೆ ನಿರ್ಮಿಸಲು ಭೂಮಿ ನೀಡಲು ಸಿದ್ದರಿದ್ದೇವೆ, ಆದರೆ ಕಳೆದುಕೊಳ್ಳುವ ಮನೆ, ಭೂಮಿ, ತೋಟಗಳ ನಷ್ಟಗಳಿಗೆ ಪರಿಹಾರ ನೀಡುವ ನಿಯಮ ಇರಬೇಕು ಎಂದು ಅಭಿಪ್ರಾಯ ಸಭೆಯ ಗಮನಕ್ಕೆ ತಂದರು.
ವೇದಿಕೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ಪಂಚಾಯತ್ ಸದಸ್ಯರಾದ ಪ್ರವೀಣ, ಸುಭಾಶ್ಚಂದ್ರ, ಉದಯ ಕುಮಾರ, ಶಾಸ್ತಾವು ದೇವಸ್ಥಾನ ಮೋಕ್ತೇಸರ ಎನ್. ಎ. ಜಿತೇಂದ್ರ,ಕಲ್ಲಪಳ್ಳಿ ಪಂಚಾಯತ್ ಸದಸ್ಯ ರಾಧಾಕೃಷ್ಣ, ಪೆರುಮುಂಡ ಜಯಪ್ರಕಾಶ್, ಪೆರಾಜೆ ಪಂಚಾಯತ್ ಉಪಾಧ್ಯಕ್ಷ ಎನ್. ಬಿ. ನಂಜಪ್ಪ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪಿ. ಎಂ. ಅಶೋಕ, ಇವರುಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ಸದಸ್ಯ ಕೊಳಂಗಾಯ ಹರೀಶ್ ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತಾಡಿದರು. ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಂದಿಸಿದರು.