ಅಮೃತ ಮಹೋತ್ಸವ ಆಚರಣೆಗೆ ನಿರ್ಧಾರ , ಕೆಪಿಎಸ್ ತೆರೆಯಲು ಆಗ್ರಹ
ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾ ಸಂಸ್ಥೆಯು ಆರಂಭಗೊಂಡು 75 ವರ್ಷಗಳು ಪೂರ್ಣಗೊಂಡ ಮತ್ತು ಸಂಸ್ಥೆಯು ಪ್ರಸ್ತುತ ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸುವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆಯೊಂದು ಸೆ. 13 ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸವಿತಾರ ಮುಡೂರು ಅವರು , ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ ಸಂವಹನಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಿರುವುದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಸಂಸ್ಥೆಯ ಒಳಿತಿಗಾಗಿ ಹಲವಾರು ಅಭಿಪ್ರಾಯಗಳು ಬಂದಿದೆ. ಎಲ್ಲವನ್ನು ಕ್ರೊಢೀಕರಿಸಿಕೊಂಡು ಸಂಸ್ಥೆಯ ಮುಂದಿನ ಬೆಳವಣಿಗೆ ಬಗ್ಗೆ ನಾವು ಚಿಂತಿಸಿ ಕಾರ್ಯೋನ್ಮುಖರಾಗಬೇಕಿದೆ.















ಅಮೃತ ಮಹೋತ್ಸವ ಕೇವಲ ಒಂದು ಆಚರಣೆಗೆ ಸೀಮಿತಗೊಳ್ಳದೆ ಸಂಸ್ಥೆಯ ಮುಂದಿನ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನೆರವಾಗಲಿದೆ.
ಶಾಲಾ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆ ಹೊಂದಿದೆ. ಮುಖ್ಯ ಕಟ್ಟಡದ ಅರ್ಧಭಾಗ ಲೋಕೋಪಯೋಗಿ ಇಲಾಖೆಯಿಂದ ತೆರವಿಗೆ ಸೂಚನೆಯಾಗಿದೆ. ಕೊಠಡಿ
ಕೊರತೆಯಿಂದ ಒಂದು ತರಗತಿಯು ಬೆಳ್ಳಿ ರಂಗ ಮಂಟಪದಲ್ಲಿ ನಡೆಯುತ್ತಿದೆ. ಆದ್ದರಿಂದ ಶಾಲೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಏನಾದರೂ ಒಂದು ಹೊಸ ಯೋಜನೆಯನ್ನು ಹಮ್ಮಿಕೊಳ್ಳಬೇಕಾಗಿದೆ.
ಕೆಪಿಎಸ್ ತೆರೆಯುವ ಪ್ರಯತ್ನ ಪ್ರಾರಂಭಿಸಲಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸುವುದು ಸಣ್ಣ ಮಾತಲ್ಲ. ದೊಡ್ಡಮಟ್ಟದ ಪ್ರಯತ್ನಗಳು ಸರಕಾರದ ಮಟ್ಟಿನಲ್ಲಿ ನಡೆಯಬೇಕಾಗುತ್ತದೆ. ಅಮೃತ ಮಹೋತ್ಸವದ ನೆನಪಲ್ಲಿ ನಾವೆಲ್ಲ ಸೇರಿ ಈ ಬಗ್ಗೆ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು.

ಈ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಮಾತನಾಡಿ, ಕೆಪಿಎಸ್ ತೆರೆಯಲು ಮನವಿ ಮಾಡಲಾದ ಆರಂಭಿಕ ಪ್ರಯತ್ನದ ವಿವರ ನೀಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೂ ಆಗಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ, ಪಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಸುಚಿನ್ನ ಕಾಣಿಕೆ, ನಿವೃತ್ತ ಶಾರೀರಿಕ ಶಿಕ್ಷಕ ಯೋಗೀಶ್ ಚಿದ್ಗಲ್, ಸಾಮಾಜಿಕ ಧುರೀಣ ಚಿನ್ನಪ್ಪ ಸಂಕಡ್ಕ, ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ , ಕೃಷಿಕ ಸುಬ್ರಾಯ ಭಟ್ ಕೆ.ಎಸ್. ಅಲಕ, ಉಪನ್ಯಾಸಕ ಡಾ. ಸೀತಾರಾಮ ಪಲ್ಲೋಡಿ, ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು.
ಸಂಸ್ಥೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂಸ್ಥೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಕೆಪಿಎಸ್ ತೆರೆಯಲು ಸರಕಾರವನ್ನು ಆಗ್ರಹಿಸುವುದು , ಹೊಸ ಕೊಠಡಿಗಳ ನಿರ್ಮಾಣ, ಶಾಸಕರು, ಸಚಿವರ, ಅಧಿಕಾರಿಗಳ ಸಂಪರ್ಕ, ಹೊಸ ಯೋಜನೆಗಳಿಗೆ ಪ್ರೇರಣೆಯಾಗಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ಅಮೃತ ಮಹೋತ್ಸವ ಆಚರಣೆ ಮಾಡುವ ನಿರ್ಧಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಾಕೆ ಮಾಧವ ಗೌಡರು, ಅಮೃತ ಮಹೋತ್ಸವ ಆಚರಿಸುವಂತಹ ಸಂಸ್ಥೆಯು ಕೊರತೆಗಳಿಂದ ಬಳಲುವುದು ಶೋಭೆಯಲ್ಲ. ಸಂಸ್ಥೆ ಕಟ್ಟಿದ ಹಿರಿಯರ ಆದರ್ಶವನ್ನು ನಾವು ನೆನಪಿಸಿಕೊಳ್ಳುತ್ತ ಹೊಸ ಕಾರ್ಯ ಯೋಜನೆ ರೂಪಿಸಬೇಕು. ಇದಕ್ಕೆ ಜೀವಕಳೆ ನೀಡಲು ಅಮೃತ ಮಹೋತ್ಸವ ಕಾರಣವಾಗಲಿ ಎಂದರು.
ಕಾಲೇಜು ಪ್ರಾಂಶುಪಾಲ ಚಿದಾನಂದ ಕೆ., ಪ್ರೌಢ ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ್, ಎಸ್.ಡಿ.ಎಂ.ಸಿ. ಸದಸ್ಯ ಚೆನ್ನಕೇಶವ ಆಚಾರ್ಯ, ಗೋಪಾಲ ಕೃಷ್ಣ ಬೀದಿಗುಡ್ಡೆ, ರವಿ ಚಲ್ಲಕೋಡಿ ಮೊದಲಾದವರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸುವುದು, ಅಮೃತ ಮಹೋತ್ಸವ ಸಮಿತಿ ರಚಿಸುವುದೆಂದೂ ನಿರ್ಧರಿಸಲಾಯಿತು.










