ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಲ್ಲಿ ಕಳೆದ 22 ಮನೆಗಳಿಗೆ ಮತ್ತೆ ಬೆಳಕು ಹರಿಸಿದ ಮೆಸ್ಕಾಂ

0

ಆಲೆಟ್ಟಿಯ ಬೊಳ್ಳೂರು ಭಾಗದಲ್ಲಿ 6 ದಿನಗಳಿಂದ ಸ್ಥಗಿತಗೊಂಡಿತ್ತು ವಿದ್ಯುತ್ ಸಂಪರ್ಕ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ಭಾಗದಲ್ಲಿ ಕಳೆದ ಅ. 12 ರಿಂದ ವಿದ್ಯುತ್ ಸಂಪರ್ಕವಿಲ್ಲದೆ ಸುಮಾರು 22 ಮನೆಗಳಲ್ಲಿ ಕತ್ತಲು ಕವಿದಿತ್ತು.
ಅ.12 ರಂದು ರಾತ್ರಿ ಹೊಡೆದ ಗುಡುಗು ಸಿಡಿಲಿಗೆ ಬೊಳ್ಳೂರು ಎಂಬಲ್ಲಿರುವ ಅತೀ ಹಳೆಯದಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಕೆಟ್ಟು ಹೋಗಿ ಈ ಭಾಗದಲ್ಲಿ ರುವ ಪ. ಜಾತಿ ಮತ್ತು ಪ. ಪಂಗಡಕ್ಕೆ ಸೇರಿದ ಸುಮಾರು 22 ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿ ಕತ್ತಲು ಆವರಿಸಿತು. ವಿದ್ಯುತ್ ಇಲ್ಲದೆ ನೀರಿನ ಟ್ಯಾಂಕ್ ನಲ್ಲಿ ನೀರು ಖಾಲಿಯಾಗಿ ಕುಡಿಯುವ ನೀರಿನ ಸಮಸ್ಯೆಯು ಎದುರಾಗಿತ್ತು. ಮೊಬೈಲ್ ಫೋನ್ ಗಳು ಚಾರ್ಜ್ ಇಲ್ಲದೆ ನಿಷ್ಕ್ರೀಯಗೊಂಡು ಸಂಪರ್ಕಿಸಲು ಸಾಧ್ಯ ವಿಲ್ಲದಂತಾಗಿ ಸಂಪರ್ಕ ಸಮಸ್ಯೆ ಎದುರಾಗಿತ್ತು.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಮೆಸ್ಕಾಂ ಅಧಿಕಾರಿಯವರಿಗೆ ದೂರು ನೀಡಿದ್ದಾರೆ. ಇಲಾಖೆಯವರು ಸದ್ಯದ ಪರಿಸ್ಥಿತಿಯಲ್ಲಿ ಸುಳ್ಯದಲ್ಲಿ ಟಿ. ಸಿ. ಇಲ್ಲದಿರುವುದರಿಂದ ಪುತ್ತೂರಿನಿಂದ ಅಥವಾ ಕಡಬದಿಂದತರಿಸಬೇಕಾಗಿದೆ. ಟಿ. ಸಿ ಬರುವ ತನಕ ಕಾಯುವಂತೆ ಹೇಳಿರುತ್ತಾರೆ. ಕ್ರೈನ್ ಮೂಲಕ ನೀವೇ ತರಿಸುವ ವ್ಯವಸ್ಥೆ ಮಾಡುವುದಾದರೆ ಕಡಬದಿಂದ ತರಿಸಿಕೊಡಬಹುದು ಎಂದು ಇಲಾಖೆಯಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದರು.

5 -6 ದಿನಗಳಿಂದ ಪಡುತ್ತಿರುವ ತೊಂದರೆಯ ಕುರಿತು ಸ್ಥಳೀಯ ಪಂಚಾಯತ್ ನ ಸದಸ್ಯರ ಗಮನಕ್ಕೆ ತರಲಾಗಿತ್ತು. 6 ದಿನಗಳಿಂದ ಕತ್ತಲಲ್ಲಿ ಕಳೆದ ಮನೆಗಳಿಗೆ ಕೊನೆಗೂ ಬೆಳಕು ಕಾಣುವಂತಾಯಿತು. ಮೆಸ್ಕಾಂ ಇಲಾಖೆಯ ಅಧಿಕಾರಿ ಹರೀಶ್ ನಾಯ್ಕ್ ರವರು ವಿಶೇಷ ಮುತುವರ್ಜಿ ವಹಿಸಿ ಬೇರೆ ಕಡೆಯಿಂದ
ಟಿ. ಸಿ ತರಿಸಿ ಅಳವಡಿಸಿ ಬೊಳ್ಳೂರು ಭಾಗದಲ್ಲಿ ಮತ್ತೆ ಬೆಳಕು ಹರಿಯುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ಬಹಳ ಸಮಸ್ಯೆ ಅನುಭವಿಸಿದ ಈ ಭಾಗದ ನಿವಾಸಿಗಳು ಇದೀಗ ನಿಟ್ಟುಸಿರು ಬಿಡುವಂತಾಯಿತು.