ಪಂಜದ ವಿಕೆ ರೆಸಿಡೆನ್ಸಿ ಮಾಲಕರಾಗಿರುವ ಉದ್ಯಮಿ, ಪ್ರಗತಿಪರ ಕೃಷಿಕ ವಿಜಯಕುಮಾರ್ ಸೊರಕೆಯವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.















ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ನಿವಾಸಿಯಾಗಿರುವ ವಿಜಯಕುಮಾರ್ ಸೊರಕೆಯವರು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ, ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ ಲಿ. ನಿರ್ದೇಶಕರಾಗಿ, ನರಿಮೊಗರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣ ಗುರು ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾಗಿ, ಚಾರ್ವಾಕ ಕೋರಿಯಾನ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಡಿನ ಹಲವಾರು ದೈವಸ್ಧಾನ ಮತ್ತು ದೇವಸ್ಧಾನಗಳ ಜೀರ್ಣೋದ್ಧಾರಕ್ಕೆ ಕೊಡುಗೈ ದಾನಿಯಾಗಿದ್ದಾರೆ. ಇವರು ಓರ್ವ ಯಶಸ್ವಿ ಉದ್ಯಮಿ ಮತ್ತು ಪ್ರಗತಿಪರ ಕೃಷಿಕರಾಗಿರುತ್ತಾರೆ. ವಿಜಯ ಕರ್ನಾಟಕ ಪತ್ರಿಕೆಯ 2024-25ರ ಸಾಲಿನ ಸೂಪರ್ ಸ್ಟಾರ್ ರೈತ ಪ್ರಶಸ್ತಿಗೂ ಭಾಜನರಾಗಿರುತ್ತಾರೆ. ಕೃಷಿ ಕ್ಷೇತ್ರದಲ್ಲಿ ರಂಬುಟಾನ್, ಮ್ಯಾಂಗೋಸ್ಟಿನ್, ಡ್ರಾಗನ್ ಫ್ರೂಟ್, ಲಿಂಬೆ ಮತ್ತು ಐವತ್ತಕ್ಕೂ ಹೆಚ್ಚು ವಿದೇಶಿ ಹಣ್ಣುಗಳ ಗಿಡಗಳು ಸೇರಿದಂತೆ ಅಡಿಕೆ, ತೆಂಗು, ರಬ್ಬರ್, ಕರಿಮೆಣಸು, ಕೊಕೊ, ತಾಳೆ, ಹೈನುಗಾರಿಕೆ, ನಾಟಿಕೋಳಿ ಸಾಕಣೆ, ಸಾಗುವಾನಿ, ಮಾಗುವಾನಿ, ಬೀಟಿ, ದೂಪ, ಬನಪು ಮುಂತಾದ ಅರಣ್ಯ ಗಿಡಗಳನ್ನು ಬೆಳೆಸಿ ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುತ್ತಾರೆ.
ಕೃಷಿಯೊಂದಿಗೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ ಇವರ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.










