ತಳಮಟ್ಟದ ಶಿಕ್ಷಣದಿಂದ ಅಭಿವೃದ್ಧಿ – ಭಾಗೀರಥಿ ಮುರುಳ್ಯ
ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಬಹಳಷ್ಟು ಪ್ರಯೋಜನವಿದೆ. ಎಲ್ಲಾ ಮಕ್ಕಳು ಜೊತೆಯಾಗಿ ಕಲಿಯಲು ಅವಕಾಶ ಕಲ್ಪಿಸಿದಂತಾಗಿದೆ.ಇದರಿಂದ ಮಕ್ಕಳು ಸತ್ಪ್ರಜೆಯಾಗಿ ಮೂಡಿ ಬರಲು ಪ್ರೇರಣೆಯಾಗುತ್ತದೆ.ತಳಮಟ್ಟದ ಶಿಕ್ಷಣದಿಂದ ಅಭಿವೃದ್ದಿ ಸಾಧ್ಯ ಎಂದು ಸುಳ್ಯದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಸುಳ್ಯ ಸ್ತ್ರೀಶಕ್ತಿ ಭವನದಲ್ಲಿ ಮೇ.26 ರಂದು ನಡೆದ ರಾಜ್ಯ ಬಾಲ ಭವನ ಸೊಸೈಟಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಬಾಲ ಭವನ ಸಮಿತಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಸ್ವರ ಮಾಧುರ್ಯ ಬಳಗ ಪುತ್ತೂರು ಅರಳು ಮಲ್ಲಿಗೆ – 2023, 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರದಲ್ಲಿ ಮಾತನಾಡುತ್ತಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಕೆ.ಎಂ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬೇಸಿಗೆ ಶಿಬಿರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ದೀಪಿಕಾ ಸ್ವಾಗತಿಸಿ,ಮಾ.ರೋಹಿತ್ ಪ್ರಾರ್ಥಿಸಿ, ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ ಮತ್ತು ಶ್ರೀಮತಿ ವಿಜಯ ಜೆ.ಡಿ ಕಾರ್ಯಕ್ರಮ ನಿರೂಪಿಸಿದರು.ಮೇಲ್ಬಿಚಾರಕರು ಮತ್ತು ಕಚೇರಿ ಸಿಬ್ಬಂದಿಗಳು ಸಹಕರಿಸಿದರು.
ಮಕ್ಕಳ ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸನ್ಮಾನ
ಸುಳ್ಯದ ನೂತನ ಶಾಸಕಿಯಾದ ಭಾಗೀರಥಿ ಮುರುಳ್ಯರವರನ್ನು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.