ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳಿಗೆ ತೆರೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳು ಮೇ.25 ಕ್ಕೆ ತೆರೆ ಕಂಡಿತು. ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಶ್ರೀದೇವರ ನಿತ್ಯೋತ್ಸವ ಕೊನೆಗೊಂಡಿತು.

ಶುದ್ಧ ಷಷ್ಠಿಯ ದಿನದಂದು ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಯಿತು.


ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿಯು ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗಿ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆಯುತ್ತದೆ. ಮೇ.೨೫ ರಂದು ಷಷ್ಠಿ ಮತ್ತು ಪತ್ತನಾಜೆ ಜೊತೆಯಾಗಿ ಬಂದಿರುವುದು ವಿಶೇಷ.
ಈ ಬಾರಿ ಜೇಷ್ಠ ಶುದ್ಧಷಷ್ಠಿಯ ದಿನವಾದ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿತು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನೆರವೇರಿತು. ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವವಕ್ಕೆ ತೆರೆಯಾಯಿತು. ಊರ ಮತ್ತು ಪರವೂರ ಭಕ್ತಾಧಿಗಳು ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವಾಧಿಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.