ತಂಬಾಕು ಸೇವನೆಯ ಚಟದಿಂದ ನಾನಾ ರೀತಿಯ ಮಾರಕ ರೋಗಗಳನ್ನು ತಾನೇ ತನ್ನ ಶರೀರಕ್ಕೆ ಆಹ್ವಾನಿಸಿದಂತೆ. ಆದ್ದರಿಂದ ಈ ಚಟದಿಂದ ಮತ್ತು ಈ ಚಟ ಇರುವವರಿಂದ ದೂರ ಸರಿದರೆ ಆರೋಗ್ಯವಂತ ಜೀವನವನ್ನು ಸಂಪಾದಿಸಲು ಸಾಧ್ಯ ಎಂದು ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಬಿ ಮೋಹನ್ ಬಾಬು ತಿಳಿಸಿದರು.
ಅವರು ಇಂದು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಸುದ್ದಿ ಸಮೂಹ ಮಾಧ್ಯಮ,ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಸಭಾಂಗಣದಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲಾ ವಿದ್ಯಾರ್ಥಿಗಳಿಂದ ತಂಬಾಕು ಪದಾರ್ಥಗಳನ್ನು ದೂರವಿಡಲು ನಾನಾ ರೀತಿಯ ಕಾಯಿದೆ ಕಾನೂನುಗಳನ್ನು ರೂಪಿಸಿ ಬೇರೆ ಬೇರೆ ಇಲಾಖೆಗಳು ಸಾಕಷ್ಟು ಕೆಲಸ ಕಾರ್ಯಗಳು ಮಾಡುತ್ತಿರುತ್ತದೆ. ಅಲ್ಲದೆ ರೈತರೂ ಕೂಡ ತಂಬಾಕು ಉತ್ಪಾದನೆಯನ್ನು ನಿಲ್ಲಿಸಿ ಆಹಾರ ಪದಾರ್ಥಗಳ ಉತ್ಪಾದನೆಗಳನ್ನು ಬೆಳೆಸುವಂತೆ ಪ್ರೋತ್ಸಾಹಿಸಲು ವಿವಿಧ ಯೋಜನೆಗಳನ್ನು ತರಲಾಗುತ್ತಿದೆ.ಆದರೆ ಲಾಭದಾಯಕ ದೃಷ್ಟಿಯಿಂದ ಇದನ್ನು ಬೆಳೆಯುವ ಕೃಷಿಕರು ತಂಬಾಕು ಉತ್ಪಾದನೆಗಳನ್ನು ಕಡಿಮೆಗೊಳಿಸಲು ಮುಂದಾಗುತ್ತಿಲ್ಲ.
ಇದರ ಅಪಾಯದಿಂದ ಸಂರಕ್ಷಿಸಿಕೊಳ್ಳಲು ಜನಜಾಗೃತಿ ಅತಿ ಅವಶ್ಯಕವಾಗಿದೆ. ಆದ್ದರಿಂದ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ನ್ಯಾಯಾಲಯದ ಕಿರಿಯ ನ್ಯಾಯಾಧೀಶೆ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಕು.ಅರ್ಪಿತಾ ಮಾತನಾಡಿ ಉತ್ತಮ ಸಾಧನೆ ಮಾಡಬಲ್ಲಂತಹ ವಿದ್ಯಾರ್ಥಿಗಳು ಕೂಡ ಕೆಲ ಸಂದರ್ಭದಲ್ಲಿ ಈ ಚಟಕ್ಕೆ ತುತ್ತಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಳ್ಳುವಂತಹ ಘಟನೆಗಳು ನಡೆಯುತ್ತಿರುತ್ತದೆ. ಇವೆಲ್ಲದಕ್ಕೂ ಮುಖ್ಯ ಕಾರಣ ವಿದ್ಯಾರ್ಥಿ ಜೀವನದಲ್ಲಿ, ಅಥವಾ ಬಾಲ್ಯಾವಸ್ಥೆಯಲ್ಲಿ ನಾವು ಆಯ್ಕೆ ಮಾಡುವ ನಮ್ಮ ಸ್ನೇಹಿತರ ಆಯ್ಕೆ. ನಮ್ಮ ಆಯ್ಕೆ ಈ ರೀತಿಯ ಚಟದವರು ಆಗಿದ್ದಲ್ಲಿ ನಾವು ಕೂಡ ಅವರೊಂದಿಗೆ ಅವರ ಚಟಗಳಲ್ಲಿ ಸೇರಿಕೊಳ್ಳುವ ಸಂದರ್ಭ ಸೃಷ್ಟಿಯಾಗುತ್ತದೆ. ಆದ್ದರಿಂದ ಉತ್ತಮ ಸ್ನೇಹಿತರನ್ನು ಹಾಗೂ ಉತ್ತಮ ಮಾರ್ಗದರ್ಶಕರನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಪೋಷಕರು ಮತ್ತು ಗುರು ಹಿರಿಯರು ನಮ್ಮ ಒಳಿತಿಗಾಗಿ ಹೇಳಿಕೊಡುವಂತಹ ವಿಷಯಗಳನ್ನು ಅನುಸರಿಸಿ ಜೀವಿಸಿದರೆ ಈ ರೀತಿಯ ಅನಾಹುತಗಳಿಗೆ ಆಸ್ಪದ ಕೊಡುವಂತಹ ಸಂದರ್ಭ ನಮಗೆ ಬಂದೊದಗುವುದಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರಾದ ಶ್ರೀಹರಿ ಕುಕ್ಕುಡೇಲು ಮಾತನಾಡಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ತೊಂದರೆಗಳು ಮತ್ತು ಅವುಗಳನ್ನು ನಮ್ಮ ಜೀವನದಿಂದ ದೂರವಿಡಲು ಅನುಸರಿಸಬೇಕಾದ ಜೀವನಶೈಲಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಪರಿಸರಗಳಲ್ಲಿ ತಂಬಾಕು ವಸ್ತುಗಳ ಮಾರಾಟ ಅಥವಾ ಅದರ ಉಪಯೋಗಿಸುವಿಕೆಯನ್ನು ಕಂಡಾಗ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತರುವಲ್ಲಿ ಎಲ್ಲಾ ವಿದ್ಯಾರ್ಥಿಗಳು ಬದ್ಧರಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸಿ ಎಂ ರವೀಂದ್ರ ಮಾತನಾಡಿ ಧೂಮಪಾನ ಮತ್ತು ಗುಟ್ಕ ಸೇವನೆಯಿಂದ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಉಂಟುಮಾಡುವ ಉಪದ್ರಗಳಿಂದ ತಪ್ಪಿಸಲು ಪೊಲೀಸ್ ಇಲಾಖೆ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಏನೆಲ್ಲಾ ಶಿಕ್ಷೆಗಳು ಇದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸುಳ್ಯ ನ್ಯಾಯಾಲಯದ ಎ ಪಿ ಪಿ ಆರೋಣ್ ಡಿಸೋಜ ಈ ಸಂದರ್ಭದಲ್ಲಿ ಮಾತನಾಡಿ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ,ಕಚೇರಿಗಳಲ್ಲಿ,ರಸ್ತೆ ಬದಿಗಳಲ್ಲಿ ಪಾನ್ ಮತ್ತು ಗುಟ್ಕಗಳನ್ನು ತಿಂದು ಕಂಡ ಕಂಡಲ್ಲಿ ಉಗುಳಿ ಪರಿಸರವನ್ನು ಯಾವ ರೀತಿ ಹಾಳು ಮಾಡಿರುತ್ತಾರೆ ಎಂಬುದನ್ನು ವಿವರವಾಗಿ ತಿಳಿಸಿದರು.
ಬಳಿಕ ಅದೇ ವೇದಿಕೆಯಲ್ಲಿ ಸುಳ್ಯ ಪೊಲೀಸ್ ವೃತ ನಿರೀಕ್ಷಕರಲ್ಲಿ ಮನವಿ ಮಾಡಿ ಈ ರೀತಿಯ ಕೆಟ್ಟ ಸ್ವಭಾವವಿರುವ ವ್ಯಕ್ತಿಗಳನ್ನು ಕೂಡಲೇ ಕಾನೂನು ಕ್ರಮ ವಹಿಸಿ ಆತನಿಗೆ ತಕ್ಕ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದರು. ಈ ರೀತಿ ಮಾಡುವುದರಿಂದ ಅವರಲ್ಲಿ ಭಯ ಬರುತ್ತದೆ ಮತ್ತು ಪರಿಸರವು ಸ್ವಚ್ಛವಾಗಿರುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಕೀಲರುಗಳಾದ ಎಂ ವೆಂಕಪ್ಪ ಗೌಡ,ರಾಮಚಂದ್ರ ಶ್ರೀ ಪಾದ ಹೆಗ್ಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ ಕಾಡು ತೋಟ, ನಗರ ಪಂಚಾಯತಿ ಸದಸ್ಯ ದೀರಾ ಕ್ರಾಸ್ತಾ, ಮಾತನಾಡಿ ವಿಶ್ವ ತಂಬಾಕು ನಿಷೇಧ ದಿನದ ಕುರಿತು ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಸದಸ್ಯರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಳ್ಯ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು, ವಿದ್ಯಾರ್ಥಿಗಳು, ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.
ಶಾಲಾ ಉಪ ಪ್ರಾಂಶುಪಾಲ ಪ್ರಕಾಶ್ ಮುಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕ ಡಾ.ಸುಂದರ್ ಕೇನಾಜೆ ವಂದಿಸಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.