ಅಡ್ಕಾರು: ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ಹಿಂದುತ್ವ ಹಾಗೂ ಕೇಸರಿಗಾಗಿ ಬಲಿದಾನಕ್ಕೂ ಸಿದ್ಧನಿದ್ದೇನೆ: ಅರುಣ್ ಪುತ್ತಿಲ ಅಭಿಮತ

ಸುಳ್ಯದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜೂ.4ರಂದು ನಡೆಯಿತು.

ಬಳಿಕ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಹಾಗೂ ಸುಳ್ಯದ ಭಗವಾನ್ ಕನ್‌ಸ್ಟ್ರಕ್ಷನ್ ಮಾಲಕರಾದ ಗೋಪಾಲಕೃಷ್ಣ ಬೋರ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಯುವ ಮುಖಂಡ ದಿನೇಶ್ ಅಡ್ಕಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ‘ ಅಯೋಧ್ಯೆ ಹೋರಾಟಕ್ಕಾಗಿ ಜೀವನ ಪಣಕಿಟ್ಟ ಸುಳ್ಯದ ದಿ. ಕುರುಂಜಿ ಪುರುಷೋತ್ತಮ ಅವರನ್ನು ನಾವು ಸ್ಮರಿಸಬೇಕು. ಈ ರಾಷ್ಟ್ರ ಹಿಂದೂ ರಾಷ್ಡ್ರ ಆಗಬೇಕು. ಸರ್ವಾಧಿಕಾರಿ ಧೋರಣೆಯನ್ನು ಕಡೆಗಣಿಸಬೇಕು. ಅಧಿಕಾರ ಬಂದಂತಹ ಸಂದರ್ಭದಲ್ಲಿ ಯಾವುದನ್ನು ಬೇಕಾದರೂ ಮಾಡಬಹುದು ಎಂಬುದು ತಪ್ಪು ‌‌. ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗಿದರೆ ಅದಕ್ಕೆ ತಕ್ಕ ಉತ್ತರವನ್ನು ಹಿಂದೂ ಸಮಾಜ ಕೊಡುತ್ತದೆ. ಗೋಪಾಲಕೃಷ್ಣ ಅವರು ಹಿಂದೂ ಸಮಾಜದ ರಕ್ಷಣೆಗಾಗಿ ಹತ್ತು ಹಲವಾರು ಕೇಸುಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡಿದ್ದಾರೆ. ಖಾಕಿ ವ್ಯವಸ್ಥೆಯ ಅಡಿಯಲ್ಲಿ ದೌರ್ಜನ್ಯ ಎಸಗಬೇಡಿ. ಧಾರ್ಮಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ ಹಿಂದೂ ಸಮಾಜದ ಕಾರ್ಯಕರ್ತರು ಬೀದಿ ಹೆಣವಾಗುತ್ತಿದ್ದಾರೆ. ಇಡೀ ಜಗತ್ತಿಗೆ ಹಿಂದೂ ಸಮಾಜದ ಶಕ್ತಿಯನ್ನು ತೋರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇವತ್ತು ಕೆಲಸ ಮಾಡುತ್ತಿದೆ.ನೂರರ ವರ್ಷದಲ್ಲಿ ಓಂಕಾರದ ಭಗವಾಧ್ವಜ ಪ್ರತೀ ಹಿಂದುವಿನ ಮನೆಯಲ್ಲಿ ಹಾರಾಡಬೇಕು. ಪುತ್ತೂರಿನಲ್ಲಿ ಆಂದೋಲನದ ರೀತಿಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ನಡೆದಿದೆ. ‌ನಮ್ಮ ಹಿರಿಯರು ಕೈಗೊಂಡ ತಪ್ಪು ಹೆಜ್ಜೆಗಳು ಕೊನೆಯಲ್ಲಿ ನಮಗೆ ಸೋಲಾಯಿತು. ಸಂಘಕ್ಕಾಗಿ, ರಾಷ್ಟ್ರಕ್ಕಾಗಿ, ಹಲವಾರು ಕಾರ್ಯಕರ್ತರ ಬಲಿದಾನವಾಗಿದೆ. ಶಾಸಕರಾಗಿ ಜನಪ್ರತಿನಿಧಿಯಾಗಿ ಇದರ ಗೌರವ ನನಗೆ ಕಾರ್ಯಕರ್ತರು ಇಂದು ತೋರಿಸಿಕೊಟ್ಟಿದ್ದಾರೆ. ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ.


ಅಧಿಕಾರಕ್ಕಾಗಿ ಸಿದ್ಧಾಂತ, ತತ್ವ ಬಿಟ್ಟು ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿದ್ದು, ಹಿಂದುತ್ವ ಹಾಗೂ ಕೇಸರಿಗಾಗಿ ಪ್ರಾಣತ್ಯಾಗಕ್ಕೂ ನಾನು ಸಿದ್ಧನಿದ್ದೇನೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆಯಡಿ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ. ನೀವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ.
ಪುತ್ತಿಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಎನ್.ಎ. ರಾಮಚಂದ್ರ ಅವರು ಮಾತನಾಡಿ ಇವತ್ತು ಅನಂತಕುಮಾರ್ ಹೆಗಡೆ, ಸತ್ಯಜಿತ್‌ ಸುರತ್ಕಲ್, ಜಗದೀಶ್ ಕಾರಂತ ಅವರಂತಹ ಹಿಂದೂ ಮುಖಂಡರುಗಳ ಸಾಲಿಗೆ ಇಂದು ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಹಿಂದೂ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುವ ತರುಣರನ್ನು ಮುಂದೆ ತರುವುದೇ ನಮ್ಮ ಉದ್ಧೇಶ. ಯುವಕರು ಇಲ್ಲದಿದ್ದರೆ ತಾಲೂಕಿಲ್ಲ, ಜಿಲ್ಲೆಯಿಲ್ಲ, ರಾಜ್ಯ ಹಾಗೂ ದೇಶವಿಲ್ಲ. ಯುವಕರೇ ದೇಶದ ಬೆನ್ನೆಲುಬು.
ಅರುಣ್ ಕುಮಾರ್ ಅವರು ರಾಜಕೀಯಕ್ಕಾಗಿ ಹೋರಾಟ ಮಾಡಿದವರಲ್ಲ. ಹಿಂದೂ ಸಮಾಜದ ಒಳಿತಿಗಾಗಿ ಹೋರಾಟ ಮಾಡಿದವರು. ನಮ್ಮ ರಾಜಕೀಯ ಪಕ್ಷದ ನಾಯಕರು ಚಿಂತನೆ ನಡೆಸಬೇಕು. ರಾಜಕೀಯ ಪಕ್ಷದ ದುರುದ್ಧೇಶದಿಂದ ಇಂದು ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರಿನಲ್ಲಿ ಸೋಲುವಂತಾಯಿತು. ಇಲ್ಲದೇ ಹೋಗಿದ್ದರೆ ಅವರು ಇವತ್ತು ಎಂ.ಎಲ್.ಎ. ಆಗಿರುತ್ತಿದ್ದರು ಎಂದು ಎನ್.ಎ. ರಾಮಚಂದ್ರರು ನಮಗೆ ರಾಜಕೀಯದಲ್ಲಿ ಏನೂ ಬೇಕಿಲ್ಲ. ನನ್ನಲ್ಲಿ ಈ ವೇದಿಕೆಗೆ ಹೋಗಬೇಡ ಎಂದು ಹೇಳಿದವರು ಯಾರೂ ಇಲ್ಲ. ನಾವೆಲ್ಲರೂ ಇಷ್ಟು ಜನರು ಮಾತ್ರವಲ್ಲ. ಇನ್ನೂ ಹಲವಾರು ಮಂದಿ ಹಿಂದೂ ಸಮಾಜದ ಜನರು ನಿಮ್ಮೊಂದಿಗೆ ಇದ್ದೇವೆ ಎಂದರು.
ಸುಳ್ಯ ತಾಲೂಕಿನ ಹಲವಾರು ಮಂದಿ ಯುವಕರ ಬೆಂಬಲ ನಿಮ್ಮೊಂದಿಗೆ ಇದ್ದೇವೆ. ಕಳೆದ ಬಾರಿ ಸುಳ್ಯದಲ್ಲಿ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಸುಳ್ಯದಲ್ಲಿ ಶಾಸಕರನ್ನು ಗೆಲ್ಲಿಸಿದ್ದೇವೆ. ಆದರೆ ಈ ಬಾರಿ ಬದಲಾವಣೆಯ ಉದ್ದೇಶದಿಂದ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಮತಗಳಿಂದ ಶಾಸಕರನ್ನು ಗೆಲ್ಲಿಸಿದ್ದೇವೆ. ಆ ಮೂಲಕ ಸುಳ್ಯದಲ್ಲಿ ಹಿಂದೂ ಸಮಾಜದ ಶಕ್ತಿಯನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದೇವೆ. ಅರುಣ್ ಪುತ್ತಿಲ ಅವರ ಸಮಾಜಸೇವೆಯೇ ಅವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದರು.

ಅಧ್ಯಕ್ಷ ಗೋಪಾಲಕೃಷ್ಣ ಬೋರ್ಕರ್ ಅವರು ಮಾತನಾಡಿ, ಹಿಂದುತ್ವಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿದ ಪುತ್ತಿಲ ಅವರು ಇಂದು ಮಲಗಿದ್ದ ರಾಜಕೀಯ ಪಕ್ಷಗಳನ್ನು ಬಡಿದೆಬ್ಬಿಸಿದೆ. ಪುತ್ತಿಲ ಅವರು ಸಮಸ್ತ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ತಾನೊಬ್ಬ ಜನಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಂಡೆಕೋಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಕೃಷಿಕ ಹರೀಶ್ ರಾವ್ ಗಬ್ಬಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಧ್ಯಾಹ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಮಹಾಪೂಜೆ, ಶ್ರೀ ಸತ್ಯನಾರಾಯಣ ದೇವರ ಪೂಜೆಯ ಪೂರ್ಣಾಹುತಿಯ ಬಳಿಕ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಹಿಂದೂ ಬಾಂಧವರು, ಪುತ್ತಿಲ ಪರಿವಾರದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಡ್ಕಾರಿನ ಹೆಸರಾಂತ ಚಿತ್ರಕಲಾವಿದ ಶಶಿ ಅಡ್ಕಾರು ಅವರು ರಚಿಸಿದ ಚಿತ್ರವನ್ನು ಕೊಡುಗೆಯಾಗಿ ನೀಡಿದರು. ಸೇರಿದ್ದ ಹಿಂದೂ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕೇಸರಿ ಶಾಲು ಹಾಕಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು. ರವಿ ಅಡ್ಕಾರು ವಂದಿಸಿ, ವಿಖ್ಯಾತ್ ಬಾರ್ಪಣೆ ಅವರು ಕಾರ್ಯಕ್ರಮ ನಿರೂಪಿಸಿದರು.

ಪುತ್ತಿಲರಿಗೆ ಸನ್ಮಾನ – ಗೌರವವಾರ್ಪಣೆ

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಜಾಲ್ಸೂರಿನಿಂದ ಅದ್ಧೂರಿ ವಾಹನ ಮೆರವಣಿಗೆ ಮೂಲಕ ಸ್ವಾಗತ
ಸುಳ್ಯ ಭಾಗದ ಹಿಂದು ಸಮಾಜದ ಸಮಸ್ತರು, ಪುತ್ತಿಲ ಅಭಿಮಾನಿಗಳು, ಪುತ್ತಿಲ ಪರಿವಾರದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಹಿಂದೂ ಬಾಂಧವರು ಅರುಣ್ ಕುಮಾರ್ ಪುತ್ತಿಲರನ್ನು ಜಾಲ್ಸೂರಿನಲ್ಲಿ ಸ್ವಾಗತಿಸಿ, ಬರಮಾಡಿಕೊಂಡರು. ಬಳಿಕ ಜಾಲ್ಸೂರಿನಿಂದ ತೆರದ ಜೀಪಿನಲ್ಲಿ ಪ್ರಾರಂಭಗೊಂಡ ಅದ್ಧೂರಿ ಮೆರವಣಿಗೆಯು ಹಲವಾರು ದ್ವಿಚಕ್ರ ವಾಹನಗಳ ಮೆರವಣಿಗೆಯೊಂದಿಗೆ, ನಾಸಿಕ್ ಬ್ಯಾಂಡ್ , ಸಿಡಿಮದ್ದಿನ ಅಬ್ಬರದೊಂದಿಗೆ ಸಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಗೆ ಕರೆತರಲಾಯಿತು.