ಮಹೇಶ್ ಕರಿಕ್ಕಳ, ಗೋಕುಲ್ ದಾಸ್, ರುದ್ರಪಾದ ಸಹಿತ ಹಲವರ ಉಚ್ಛಾಟನೆ
ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ
ಸುಳ್ಯ ವಿಧಾನ ಸಭಾ ಕ್ಷೇತ್ರದ 17 ಮಂದಿ ನಾಯಕರ ಉಚ್ಛಾಟನೆ
2023 ರ ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಸುಳ್ಯ ಬ್ಲಾಕ್ ನ ಐವರು ನಾಯಕರನ್ನು ಅಮಾನತು ಮಾಡಿರುವುದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಕಟಣೆ ಹೊರ ಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ರಾಜ್ಯ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು, ಸುಳ್ಯ ವಿಧಾನ ಸಭಾ ಕ್ಷೇತ್ರದ ಒಟ್ಟು 17 ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಿ ಆದೇಶಿಸಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ. ಗೋಕುಲ್ ದಾಸ್, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿದ್ದ ಸಚಿನ್ ಕುಮಾರ್ ಶೆಟ್ಟಿ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಶಿಧರ ಎಂ.ಜೆ., ರವೀಂದ್ರ ಕುಮಾರ್ ರುದ್ರಪಾದ,
ಆನಂದ ಬೆಳ್ಳಾರೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಶೋಭಿತ್ ಸುಬ್ರಹ್ಮಣ್ಯ ಅವರನ್ನು ಉಚ್ಛಾಟಿಸಲಾಗಿದೆ.
ಮಾಜಿ ತಾ.ಪಂ.ಸದಸ್ಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ, ಕ್ಸೇವಿಯರ್ ಬೇಬಿ ಕುಟ್ರುಪ್ಪಾಡಿ, ಸುಧೀರ್ ದೇವಾಡಿಗ ಕಡಬ, ರಾಮಕೃಷ್ಣ ಕೆಂಜಾಳ, ಪೈಝಲ್ ಕಡಬ, ಜೈನ್ ಆತೂರು ಅವರನ್ನು ಕೂಡಾ ಉಚ್ಛಾಟಿಸಲಾಗಿದೆ.
ಇವರೆಲ್ಲರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡದೆ ವಿರುದ್ಧ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಸೋಲಲು ಕಾರಣರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಎಂ.ವೆಂಕಪ್ಪ ಗೌಡ, ನಂದಕುಮಾರ್ , ಬಾಲಕೃಷ್ಣ ಬಳ್ಳೇರಿ ಯವರಿಗೆ ಪ್ರತ್ಯೇಕವಾಗಿ ಕಾರಣ ಕೇಳಿ ಶೋಕಾಸ್ ನೋಟೀಸ್ ನೀಡಲಾಗಿದೆ.