ಮಳೆಗಾಲ ಆರಂಭಕ್ಕೂ ಮುನ್ನ ಸಂಪಾಜೆ-ಮಾಣಿ ಹೆದ್ದಾರಿ ಬಿರುಕು

0

ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರಲ್ಲಿ ಹೆಚ್ಚಿದ ಆತಂಕ

ಮಡಿಕೇರಿ ತಾಲ್ಲೂಕಿನ ಸಂಪಾಜೆ ಸಮೀಪದ ಫಾರೆಸ್ಟ್ ಡಿಫೋ ಸಮೀಪದಲ್ಲಿ ಕಳೆದ ವರ್ಷವೇ ಹೆದ್ದಾರಿಯಲ್ಲಿ ಭಾರಿ ಬಿರುಕು ಮೂಡಿತ್ತು. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಅದು ಈಗ ಇನ್ನಷ್ಟು ಜಾಸ್ತಿಯಾಗಿದ್ದು, ೧ ಅಡಿಯಷ್ಟು ಆಳಕ್ಕೆ ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ.

ಕೆಳಬಾಗದಲ್ಲಿ ನೀರಿನ ಕೊಲ್ಲಿ ಹರಿಯುತ್ತಿದ್ದು ಮಳೆ ತೀವ್ರಗೊಂಡಿತ್ತೆಂದರೆ ಕೊಲ್ಲಿ ಭಾಗಕ್ಕೆ ಸಂಪೂರ್ಣ ಜಾರಿ ಹೋಗಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


ಒಂದು ವೇಳೆ ಹಾಗೆ ಕುಸಿದು ಹೋಗಿತ್ತೆಂದರೆ ಮಡಿಕೇರಿ, ಮಂಗಳೂರು ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕವಿದೆ.

ಕಳೆದ ವರ್ಷವೇ ಈ ರಸ್ತೆ ಸ್ವಲ್ಪವೇ ಕುಸಿದಿತ್ತು. ಕೂಡಲೇ ಆ ರಸ್ತೆಯನ್ನು ಬಂದ್ ಮಾಡಿ ಪಕ್ಕದಲ್ಲಿಯೇ ಇರುವ ಹಳೆಯ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಅದರ ಮೂಲಕವೇ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಜೊತೆಗೆ ಮಳೆ ಮುಗಿಯುತ್ತಿದ್ದಂತೆ ಹೆದ್ದಾರಿಯನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹೇಳಿದ್ದರು. ಹೀಗೆ ಹೇಳಿ ವರ್ಷವೇ ಕಳೆದು ಹೋಗಿ,ಮತ್ತೊಂದು ಮಳೆಗಾಲ ಆರಂಭವಾಗಿದೆ.


ಕೊಲ್ಲಿಯಂತಿರುವ ಇಲ್ಲಿ ನೀರಿನ ಒರತೆ ಇರುವ ಜಾಗವಾಗಿದ್ದು ಇಲ್ಲಿ ಭಾರೀ ಭಾಹನಗಳು, ಪೆಟ್ರೋಲಿಯಂ ಉತ್ಪನ್ನಗಳು, ಟಿಂಬರ್ ವಾಹನಗಳು ಓಡಾಡುವುದರಿಂದ ರಸ್ತೆ ಕುಸಿಯುವುದಕ್ಕೆ ಹೆಚ್ಚಿನ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಮಳೆ ತೀವ್ರಗೊಂಡರೆ ಈ ಹೆದ್ದಾರಿ ಕುಸಿದು ಹೋಗುವುದರಲ್ಲಿ ಎರಡು ಮಾತಿಲ್ಲ. ಹೆದ್ದಾರಿ ಕುಸಿದಿದ್ದೇ ಆದಲ್ಲಿ ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ಸಂಪಾಜೆ, ಕೊಯನಾಡು,ಚೆಂಬು ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ಕುಟುಂಬಗಳು ಮಡಿಕೇರಿಯೊಂದಿಗೆ ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.