ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಂಡೋಪ ತಂಡವಾಗಿ ಮಹಿಳಾ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ರಾಜ್ಯ ಸರಕಾರವು ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ಬಳಿಕ ಕ್ಷೇತ್ರಕ್ಕೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ಗಣನೀಯವಾಗಿ ಅಧಿಕಗೊಂಡಿದೆ. ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಆದಿತ್ಯವಾರ ಈ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅದೇ ರೀತಿ ಜೂ.೧೭ ರಂದು ಬೆಳಗ್ಗಿನಿಂದಲೇ ಅಧಿಕ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಇಂದು ಕೂಡ ಈ ಸಂಖ್ಯೆ ಮತ್ತಷ್ಟು ಹೆಚ್ಚುವರಿಯಾಗಿದೆ.
ಬೆಳಗ್ಗಿನಿಂದಲೇ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ತುಂಬೆಲ್ಲಾ ಮಹಿಳಾ ಭಕ್ತರೇ ಕಂಡು ಬರುತ್ತಿದ್ದಾರೆ. ಅಲ್ಲದೆ ಕ್ಷೇತ್ರದ ಬಸ್ ನಿಲ್ದಾಣ, ರಥಬೀದಿ, ಶ್ರೀ ದೇವಳದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ ಮೊದಲಾದ ಕಡೆ ಅಧಿಕ ಸಂಖ್ಯೆ ಮಹಿಳಾ ಭಕ್ತರು ಕಂಡು ಬಂದಿದ್ದರು. ಕೆ.ಎಸ್. ಆರ್.ಟಿ.ಸಿ ಬಸ್‌ಗಳನ್ನು ಏರುವಾಗ ಆಗಾಗ್ಗೆ ನೂಕು ನುಗ್ಗಲು ಆಗುತ್ತಿತ್ತು. ಅಲ್ಲದೆ ಕಿಟಕಿ ಮೂಲಕ ತಮ್ಮ ಬ್ಯಾಗ್, ಬಟ್ಟೆಗಳನ್ನು ಹಾಕಿ ಮಹಿಳಾ ಭಕ್ತರು ಸೀಟುಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ.
ಒಂದೇ ಕುಟುಂಬದ 15 ಮಂದಿ
ಒಂದೇ ಕುಟುಂಬದ 15 ಮಂದಿ ಜೊತೆಯಾಗಿ ಕ್ಷೇತ್ರದ ಸಂದರ್ಶನಕ್ಕೆ ಜೂ.೧೭ ಆಗಮಿಸಿದ್ದರು. ನಮ್ಮದು ತುಂಬಾ ಬಡ ಕುಟುಂಬ ನಮಗೆ ಹಣಕಾಸಿನ ಅಭಾವದಿಂದ ಕ್ಷೇತ್ರ ಸಂದರ್ಶನ ಕಷ್ಟವಾಗಿತ್ತು. ಆದರೆ ರಾಜ್ಯ ಸರಕಾರ ಘೋಷಿಸಿದ ಈ ಉಚಿತ ಯೋಜನೆಯಿಂದಾಗಿ ಎಲ್ಲಾ ಕ್ಷೇತ್ರವನ್ನು ಸಂದರ್ಶನ ಮಾಡಿ ಕುಕ್ಕೆಗೆ ಆಗಮಿಸಿದ್ದೇವೆ.ಕುಕ್ಕೆ ಸುಬ್ರಹ್ಮಣ್ಯನ ದರುಶನದ ಬಳಿಕ ಊರಿಗೆ ತೆರಳುತ್ತೇವೆ.ನಮ್ಮಂತಹ ಬಡವರಿಗೆ ಈ ಯೋಜನೆ ತುಂಬಾ ಉಪಯುಕ್ತವಾಗಿದೆ ಎಂದಿದ್ದಾರೆ ಈ ಕುಟುಂಬದ ಮಹಿಳೆಯರು.