17 ಕೋಟಿ ರೂ.ವೆಚ್ಚದ ಯೋಜನೆ 6 ತಿಂಗಳಲ್ಲಿ ಸಿದ್ಧ
…. ಶಿವಪ್ರಸಾದ್ ಕೇರ್ಪಳ
ಬಹು ನಿರೀಕ್ಷಿತ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ಸುಳ್ಯ ಸಮೀಪದ ಕಲ್ಲುಮುಟ್ಲು ಎಂಬಲ್ಲಿ ಪಯಸ್ವಿನಿ ನದಿಗೆ ಕಿಂಡಿಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದೆ.
ಸುಳ್ಯ ನಗರಕ್ಕೆ ಬೇಸಗೆಯಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನಲೆಯಲ್ಲಿ ಹಾಗೂ ನೀರಾವರಿ ಉzಶದಿಂದ ಸುಳ್ಯದಲ್ಲಿ ಪಯಸ್ವಿನಿ ಹೊಳೆಗೆ ಕಲ್ಲುಮುಟ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ೧೭ ಕೋಟಿ ರೂ. ಅನುದಾನ ಮಂಜೂರುಗೊಂಡಿತ್ತು. ಈ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕರಾಗಿದ್ದ ಮಾಚಿ ಸಚಿವ ಎಸ್.ಅಂಗಾರರು ಡಿ.೯ರಂದು ಚಾಲನೆ ನೀಡಿದ್ದರು.
ಭರದಿಂದ ನಡೆದ ಕಾಮಗಾರಿ
ಉಡುಪಿ ಮೂಲದ ಜಯಶೀಲ ನಾರಾಯಣ ಶೆಟ್ಟಿ ಎಂಬವರು ಕಾಮಗಾರಿ ನಿರ್ವಹಿಸಿದ್ದು, ಕೆಲಸ ಆರಂಭಗೊಂಡ ಕೇವಲ ೬ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೆಲಸ ಆರಂಭದ ಸಂದರ್ಭದಲ್ಲಿ ಹರಿಯುತ್ತಿರುವ ಹೊಳೆಯ ನೀರಿಗೆ ಕಾಮಗಾರಿ ನಡೆಸಲು ಅನುಕೂಲವಾಗುವಂತೆ ನೀರನ್ನು ಮಣ್ಣು ಹಾಕಿ ಹಿಡಿದಿಟ್ಟು, ಇನ್ನೊಂದು ಬದಿಯಿಂದ ಹರಿಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಒಂದು ಭಾಗದಿಂದ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭಿಸಲಾಯಿತು. ಒಟ್ಟು ೧೩ ಪಿಲ್ಲರ್‌ಗಳು ನಿರ್ಮಾಣವಾಗಿದ್ದು ಎರಡೂ ಬದಿಯಲ್ಲೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಕಿಂಡಿ ಅಣೆಕಟ್ಟಿನಲ್ಲಿ ೯.೩೪ ಮಿಲಿಯನ್ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಂಡಿ ಅಣೆಕಟ್ಟು ಕಾಮಗಾರಿ ೧೧ ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸರಕಾರ ಸೂಚಿಸಿದ ಸುತ್ತೋಲೆಯಲ್ಲಿದೆ. ಆದರೆ ಮಳೆಗಾಲ ಪೂರ್ಣ ಆರಂಭಕ್ಕೂ ಮೊದಲೇ ಕಾಮಗಾರಿ ಪೂರ್ಣಗೊಂಡಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಬೇಸಗೆಯಲ್ಲಿ ನೀರಿನ ಅಭಾವ ಕಂಡುಬರುತ್ತದೆ. ಈ ಸಮಸ್ಯೆ ನಿವಾರಣೆಯಾಗಬೇಕಿದ್ದರೆ ಕಲ್ಲುಮುಟ್ಲುನಲ್ಲಿ ಕಿಂಡಿಅಣೆಕಟ್ಟು ಅಗತ್ಯವಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಈ ವರ್ಷದಿಂದ ಈ ಭಾಗದ ನೀರಿನ ಅಭಾವ ದೂರವಾಗಲಿದೆ
ಈ ಕಿಂಡಿಣೆಕಟ್ಟಿನ ಪಕ್ಕದಲ್ಲೇ ಜಾಕ್‌ವೆಲ್ ಕಾಮಗಾರಿ ಆರಂಭಗೊಂಡಿತ್ತು. ಆದರೆ ಅದು ಕೆಲಸ ಸಮಯ ಕೆಲಸ ಆಗದೇ ನಿಂತಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭಗೊಂಡಿದೆ. ಮುಂದಕ್ಕೆ ಅಧಿಕ ಸಾಮಾರ್ಥ್ಯದ ನೀರು ಶುದ್ಧೀಕರಣ ಘಟಕದ ಅಗತ್ಯತೆ ಇಲ್ಲಿಗಿದೆ. ಅದಕ್ಕೂ ಕೂಡಾ ೬೦ ಕೋಟಿ ರೂ ಮಂಜೂರುಗೊಂಡಿದೆ ಎಂದು ನ.ಪಂ. ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.
ಕಿಂಡಿಣೆಕಟ್ಟಿನ ಕೆಲಸ ಮುಗಿದು ನೀರು ನಿಲ್ಲಿಸುವ ಪ್ರಕ್ರಿಯೆ ನಡೆಸಲಾಗಿದ್ದು ಯಶಸ್ವಿಯಾಗಿದೆ. ಇದೀಗ ಕೊನೆಯ ಹಂತವಾಗಿ ಮೆಕ್ಯಾನಿಕಲ್ ವಿಭಾಗದ ಕೆಲಸಗಳು ನಡೆಯುತ್ತಿದೆ.
ಕಿಂಡಿಅಣೆಕಟ್ಟಿಗೆ ಜೋಡಿಸಲಾಗಿರುವ ಕಬ್ಬಿಣದ ಗೇಟುಗಳು ಇರುವಷ್ಟು ಎತ್ತರಕ್ಕೆ ನೀರು ಹಿಡಿದಿಡಲಾಗುವುದು. ಅದು ಸರಿ ಸುಮಾರು ೬ ಕಿ.ಮೀ. ದೂರದವರೆಗೆ ಅದೇ ಎತ್ತರದಲ್ಲಿ ನೀರು ನಿಲ್ಲಬಹುದೆಂಬ ನಮ್ಮ ಲೆಕ್ಕಾಚಾರವಿದೆ. ಹೆಚ್ಚುವರಿ ನೀರು ಹರಿದು ಹೋಗುತ್ತದೆ. ಮೆಕ್ಯಾನಿಕಲ್ ವಿಭಾಗದ ಕೆಲಸ ಮುಗಿದು ಒಂದು ತಿಂಗಳಲ್ಲಿ ಎಷ್ಟು ನೀರು ನಿಲ್ಲುತ್ತದೆ ಇತ್ಯಾದಿ ಮಾಹಿತಿಯನ್ನು ಸ್ಪಷ್ಟ ಪಡಿಸುತ್ತೇವೆ.
-ಹೇಮಂತ್ ಕುಮಾರ್
ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ
ಕಿಂಡಿ ಅಣೆಕಟ್ಟು ಮಾಡುವ ಮೊದಲು ಪ್ರತೀ ವರ್ಷವೂ ಕಲ್ಲುಮುಟ್ಲಿನಲ್ಲಿ ಪಯಸ್ವಿನಿ ಹೊಳೆಗೆ ನ.ಪಂ. ವತಿಯಿಂದ ಸುಮಾರು ೩ -೪ ಲಕ್ಷ ರೂ ವೆಚ್ಚದಲ್ಲಿ ಮರಳು ತುಂಬಿದ ಚೀಲವನ್ನಿಟ್ಟು ನೀರನ್ನು ನಿಲ್ಲಿಸುವ ಕೆಲಸ ಮಾಡಲಾಗುತ್ತದೆ. ಆದರೆ ಮುಂದಿನ ವರ್ಷದಿಂದ ಈ ಸಮಸ್ಯೆ ಇರುವುದರಿಂದ ಕಿಂಡಿ ಅಣೆಕಟ್ಟಿನ ಕಬ್ಬಿಣವನ್ನು ಇಳಿಸಿ ನೀರನ್ನು ಹಿಡಿದಿಡಲಾಗುತ್ತದೆ.
೧೩ ಪಿಲ್ಲರ್‌ಗಳು ಕಿಂಡಿ ಅಣೆಕಟ್ಟಿನಲ್ಲಿ ಮಾಡಲಾಗಿದೆ. ಒಂದು ಪಿಲ್ಲರ್‌ನಿಂದ ಮತ್ತೊಂದು ಪಿಲ್ಲರ್‌ಗೆ ೬ ಮೀಟರ್ ಅಂತರ ಇದೆ. ನಾಲ್ಕು ಮೀಟರ್ ಎತ್ತರಕ್ಕೆ ಕಬ್ಬಿಣದ ಗೇಟು ಮಾಡಲಾಗಿದೆ. ಮಳೆಗಾಲದಲ್ಲಿ ಈ ಗೇಟು ಗಳನ್ನು ಮೇಲೆ ಸರಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತದೆ. ಬೇಸಗೆಯನ್ನು ಅದನ್ನು ನದಿಗೆ ಇಳಿಸಿ ನೀರು ಹಿಡಿದಿಡುವ ಕಾರ್ಯ ನಡೆಯುತ್ತಿದೆ. ಕಿಂಡಿ ಅಣೆಕಟ್ಟಿನ ಮೇಲಿನ ಸೇತುವೆ ಯಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವ ವ್ಯವಸ್ಥೆಯೂ ಇದೆ.