ಕೆವಿಜಿ ಐಪಿಎಸ್‌ನಲ್ಲಿ ಶಾಲಾ ಸಂಸತ್ ಪದಗ್ರಹಣ ಸಮಾರಂಭ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 2023-24ರ ಸಾಲಿನ ಶೈಕ್ಷಣಿಕ ವರ್ಷದ ‘ ಶಾಲಾ ಸಂಸತ್ ಮಂತ್ರಿಮಂಡಲದ ಪದಗ್ರಹಣ ‘ ಸಮಾರಂಭವು ಜೂ.28 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಿತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಸುಳ್ಯದ ಸಬ್ ಇನ್ಸ್ಪೆಕ್ಟರ್ ಆಗಿರುವ ಈರಯ್ಯ ಡಿ. ಯನ್ , ಕೆವಿಜಿ ಐಪಿಎಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಡಾ.ಉಜ್ವಲ್ ಯು. ಜೆ, ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಸಂತೋಷ್ ಕುತ್ತಮುಟ್ಟೆ, ಬಾಲಕೃಷ್ಣ ಸೇರ್ಕಜೆ ಮತ್ತು ಪಿ. ಎಸ್ ಗಂಗಾಧರ ಇವರನ್ನು ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ಜೊತೆಗೆ ವಿದ್ಯಾರ್ಥಿ ನಾಯಕರು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಹತ್ತನೇ ತರಗತಿಯ ಡಿ. ಅಂಶಿ ಬಂದಿರುವ ಎಲ್ಲಾ ಮಹನೀಯರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದಳು.
ಶಾಲಾ ನಾಯಕನಾಗಿ ಅಧಿಕಾರವನ್ನು ಪಡೆದ ಅಹಮ್ಮದ್ ಅನ್ಸಿಫ್, ಉಪನಾಯಕ ಉತ್ಸವ್ ಯು. ಯು, ಶಾಲಾ ನಾಯಕಿ ಫಲಕ್ ಫಾರೂಕ್, ಉಪನಾಯಕಿ ಸಾನ್ವಿ. ಎಸ್, ಸಾಂಸ್ಕೃತಿಕ ಮಂತ್ರಿ ಶ್ರೇಯ.ಎಸ್, ಉಪ ಸಾಂಸ್ಕೃತಿಕ ಮಂತ್ರಿ ಅದ್ವೈತ್ ಕೆ. ಪಿ, ಶಿಕ್ಷಣ ಮಂತ್ರಿ ಮನ್ವಿತ್ ಎ. ಎಸ್, ಉಪ ಶಿಕ್ಷಣ ಮಂತ್ರಿ ಆಶಿಶ್. ಎಮ್, ಶಿಸ್ತಿನ ಮಂತ್ರಿ ಸಮೃದ್ಧಿ ಆಳ್ವ, ಉಪಶಿಸ್ತಿನ ಮಂತ್ರಿ ಪ್ರಶೋಭ್ ಪಿ , ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಅದ್ವಿತ್. ಎ ಉಪ ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿ ಫಾತಿಮಾ ಅಲಾ, ಕ್ರೀಡಾ ಮಂತ್ರಿ ಇಶನ್ ಅಹ್ಮದ್, ಉಪ ಕ್ರೀಡಾ ಮಂತ್ರಿ ಪುನರ್ವಿ, ಮಾಧ್ಯಮ ವೃಂದದವರು ಮತ್ತು ಶಾಲೆಯ ನಾಲ್ಕು ತಂಡದ ನಾಯಕರುಗಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪದವಿ ಪದಕ ನೀಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಆಮೇಲೆ ಪ್ರಾಂಶುಪಾಲರಾದ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಾಯಕರು ಬರಿ ನಾಯಕರಾಗದೆ, ಜವಾಬ್ದಾರಿಯುತ ಆಡಳಿತಗಾರರಾಗ ಬೇಕು. ಪ್ರತಿಯೊಬ್ಬರೂ ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿ ತಂಡದ ನಾಯಕ ಅಹಮದ್ ಅನ್ಸಿಫ್ , ನಾಯಕಿ ಫಲಕ್ ಫಾರೂಕ್ ‘ ನಾವು ನಮ್ಮ ಕರ್ತವ್ಯವನ್ನು ಅತಿ ಶ್ರದ್ಧೆಯಿಂದ ಮತ್ತು ಜವಾಬ್ದಾರಿಯಿಂದ ಮಾಡುತ್ತೇವೆ ‘ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕೆವಿಜಿ ಐಪಿಎಸ್ ನ ಸಂಚಾಲಕ ಡಾ.ರೇಣುಕಾಪ್ರಸಾದ್ ಹಾಗೂ ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್ ‘ ಬದುಕಿನಲ್ಲಿ ನಿಶ್ಚಿತ ಗುರಿ ‘ಸತತ ಅಭ್ಯಾಸ, ಏಕಾಗ್ರತೆ ಇಟ್ಟುಕೊಂಡು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದು’ ವಿದ್ಯಾರ್ಥಿಗಳಿಗೆ ಶುಭ ಸಂದೇಶ ಕಳುಹಿಸಿದ್ದರು.
ಕೆವಿಜಿ ಐಪಿಎಸ್ ನ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು. ಜೆ ‘ ವಿದ್ಯಾರ್ಥಿಗಳಿಗೆ ನಾಯಕತ್ವ ಕೊಡುವುದು ಅತಿ ಉತ್ತಮ. ನಾಯಕತ್ವದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಶಾಲೆಯ ಬಗ್ಗೆ ಜವಾಬ್ದಾರಿಯುತ ಆಡಳಿತ ಶಿಕ್ಷಕರಷ್ಟೇ ವಿದ್ಯಾರ್ಥಿ ನಾಯಕರಿಗೆ ಇರುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಳಿಕ ಮಾತಾಡಿದ ಸುಳ್ಯದ ಸಬ್ ಇನ್ಸ್ಪೆಕ್ಟರ್ ಈರಯ್ಯ ‘ ಶಾಲಾ ಹಂತದಲ್ಲಿ ನಾಯಕತ್ವದ ಗುಣವನ್ನು ಬೆಳೆಸಿದರೆ ಮುಂದೆ ಉತ್ತಮ ನಾಯಕರಾಗಲು ಸಾಧ್ಯ. ಪ್ರತಿಯೊಬ್ಬರೂ ತಮ್ಮಲ್ಲಿರುವ ಸ್ವಾರ್ಥವನ್ನು ಬಿಟ್ಟು ಉತ್ತಮ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಮೊಬೈಲಿನಿಂದ ದೂರವಿದ್ದು ಒಳ್ಳೆಯ ವ್ಯಕ್ತಿಗಳ ಸ್ನೇಹವನ್ನು ಮಾಡಿ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ಸಮಾಜದಲ್ಲಿ ನಿರ್ವಹಿಸಿಕೊಂಡು ಹೋಗಬೇಕು ‘ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಶಿಶಿರ್ ಗಿರೀಶ್ ಮತ್ತು ಕೆ.ಅತುಲ್ಯ ನಿರೂಪಿಸಿದರು. ಸಾಯಿಚರಣ್ ಧನ್ಯವಾದವನ್ನು ಸಲ್ಲಿಸಿದನು . ಈ ಕಾರ್ಯಕ್ರಮದಲ್ಲಿ ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ಮತ್ತು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಅಂತಿಮವಾಗಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು.