ವನ ಮಹೋತ್ಸವ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ
ಗ್ರಂಥಾಲಯದಿಂದ ಸಮಾಜದ ಅಭಿವೃದ್ಧಿ : ಭಾಗೀರಥಿ ಮುರುಳ್ಯ
“ಗ್ರಾಮ ಪಂಚಾಯತ್ ಗ್ರಂಥಾಲಯಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು
ಸಮಾಜದಲ್ಲಿ ಒಳ್ಳೆಯ ನಾಗರೀಕರಾಗಿ,ಸುಸಂಸ್ಕೃತ ವ್ಯಕ್ತಿಗಳಾಗಿ ಬಾಳಬೇಕು. ಜ್ಞಾನಾರ್ಜನೆಗೆ ಗ್ರಂಥಾಲಯ ಪೂರಕವಾಗಿದೆ .
ಇದರಿಂದ ಸಮಾಜದ ಅಭಿವೃದ್ದಿಯೂ ಸಾಧ್ಯವಾಗುತ್ತದೆ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಐವರ್ನಾಡು ಪ್ರಾ.ಕೃ.ಪ.ಸ.ಸಂಘ,ಅರಣ್ಯ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಬಳಿಕ ವನ ಮಹೋತ್ಸವ ಮತ್ತು ವಿವಿಧ ಸಾರ್ವಜನಿಕ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಪ್ರಸ್ತಾವಿಕವಾಗಿ ಮಾತನಾಡಿದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪರವರು ಗಿಡ ನೆಡುವ ಬಗ್ಗೆ ,ವನಮಹೋತ್ಸವ ನಡೆಸುವ, ಅರಣ್ಯ ಬೆಳೆಸುವ ಉದ್ದೇಶದ ಬಗ್ಗೆ ಮಾತನಾಡಿದರು.
ಐವರ್ನಾಡು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥರವರು ಮಾತನಾಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಐವರ್ನಾಡಿನ ಗ್ರಾಮಸ್ಥರು ಕಾರಣರಾಗಿದ್ದಾರೆ.ಇಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡತ್ತೇವೆ.ಈ ಬಾರಿ ಪ್ರತಿ ಮನೆಯವರು ಒಂದೊಂದು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಣೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ವಲಯಾರಣ್ಯಾಧಿಕಾರಿ ಕಿರಣ್, ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಇಸಾಕ್, ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ವಂದಿಸಿದರು.
ಮಮತಾ ಉದ್ದಂಪಾಡಿ ಮತ್ತು ಬಳಗದವರು ಪ್ರಾರ್ಥಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.