ಹವಾಮಾನ ಆಧಾರಿತ ಬೆಳೆ ವಿಮೆ ತಕ್ಷಣ ಜಾರಿ ಮಾಡುವಂತೆ ಸುಳ್ಯ ಸಹಕಾರಿ ಯೂನಿಯನ್ ಒತ್ತಾಯ

0

ಹವಾಮಾನ ಆಧಾರಿತ ಬೆಳೆ ವಿಮೆ ತಕ್ಷಣ ಜಾರಿ ಮಾಡುವಂತೆ ಸುಳ್ಯ ಸಹಕಾರಿ ಯೂನಿಯನ್ ಸರಕಾರವನ್ನು ಒತ್ತಾಯಿಸಿದೆ.

2016ರಿಂದ ಆರಂಭಗೊಂಡಿರುವ ಬೆಳೆ ವಿಮೆಯಿಂದ ಕೃಷಿಕರು ಪ್ರಯೋಜನ ಪಡೆಯುತ್ತಿದ್ದಾರೆ.‌ ಪ್ರತಿ ವರ್ಷ ಜೂ.30ರೊಳಗೆ ಪ್ರೀಮಿಯಂ ಪಾವತಿಯಾಗಿರುತ್ತದೆ. ಆದರೆ ಈ ಬಾರಿ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಕೂಡಾ ಸಹಕಾರಿ ಸಂಘಕ್ಕೆ ಪ್ರೀಮಿಯಂ ಪಾವತಿಗೆ ಯಾವುದೇ ಆದೇಶಗಳು ಬಂದಿಲ್ಲ ಎಂದು ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ, ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ ಹೇಳಿದರು. ಅವರು ಇಂದು ಸುಳ್ಯ ದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಬೆಳೆ ವಿಮೆಯ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಸೊಸೈಟಿಗಳಿಗೆ ಈ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ.‌ ಕೃಷಿಕರು ಸೊಸೈಟಿಗೆ ಬಂದು ವಿಮೆಯ ಬಗ್ಗೆ ಕೇಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ‌ ಪಾವತಿದಾರರು ಹೆಚ್ಚಾಗುತ್ತಿದ್ದಾರೆ. ಬೆಳೆವಿಮೆ ರೈತರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಈ ಬಾರಿ ಬೆಳೆ ವಿಮೆ ಪಾವತಿಯೇ ಆಗದಿರುವುದರಿಂದ ಕೃಷಿಕರು ಗೊಂದಲಕ್ಕೀಡಾಗಿದ್ದಾರೆ.‌ ಹೀಗಾಗಿ ಸರಕಾರ ವಿಳೆ‌ವಿಮೆ ಪಾವತಿಗೆ ಸಹಕಾರಿ ಸಂಘಗಳಿಗೆ ತಕ್ಷಣ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸಹಕಾರಿ ಯೂನಿಯನ್ ನಿರ್ದೇಶಕ, ನೆಲ್ಲೂರು ಕೆಮ್ರಾಜೆ ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮಾತನಾಡಿ ಬೆಳೆ ವಿಮೆ ಪ್ರೀಮಿಯಂ ಕಳೆದ ವರ್ಷ ತಾಲೂಕಿನಲ್ಲಿ ಸುಮಾರು 6 ಕೋಟಿ 57 ಲಕ್ಷದಷ್ಟು ಪಾವತಿಯಾಗಿತ್ತು. 27, 446 ಕೃಷಿಕರು ಪ್ರೀಮಿಯಂ ಪಾವತಿಸಿದ್ದರು. ಈ ವರ್ಷ ಪ್ರೀಮಿಯಂ ಕಟ್ಟಲು ಬಾರದ ಕಾರಣ ಆದಾಯ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸರಕಾರ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ತಕ್ಷಣ ಆದೇಶ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕ, ಅರಂತೋಡು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಸಹಕಾರಿ ಯೂನಿಯನ್ ನಿರ್ದೇಶಕಿ, ಉ.ಮಿತ್ತೂರು ಸೊಸೈಟಿ ನಿರ್ದೇಶಕಿ ಶಾರದಾ ವಿ. ಶೆಟ್ಟಿ ಉಪಸ್ಥಿತರಿದ್ದರು. ಸಹಕಾರಿ ಯೂನಿಯನ್ ಕಾರ್ಯದರ್ಶಿ ಅರಂತೋಡು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಕೇರ್ಪಳ ಸ್ವಾಗತಿಸಿ, ವಂದಿಸಿದರು.