ರಸ್ತೆ ನಿಯಮ ಪಾಲಿಸದ ನೂರಾರು ವಾಹನಗಳಿಗೆ ದಂಡ
ಕಳೆದ ಒಂದು ವಾರಗಳಿಂದ ಸುಳ್ಯ ನಗರದಲ್ಲಿ ಸುಳ್ಯ ಠಾಣಾ ಪೊಲೀಸರಿಂದ ಬಿಗು ತಪಾಸಣಾ ಕಾರ್ಯ ನಡೆಯುತ್ತಿದೆ.
ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಹೋಗುವುದು,ಕಾರು ಮುಂತಾದ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ಹೋಗುವುದು, ವಾಹನಗಳ ಇನ್ಸೂರೆನ್ಸ್, ವಾಹನ ಚಾಲಕರ ಚಾಲನಾ ಲೈಸೆನ್ಸ್, ಹಾಗೂ ವಾಹನಗಳ ಇನ್ನಿತರ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ರಸ್ತೆ ನಿಯಮವನ್ನು ಪಾಲಿಸದೆ ವಾಹನ ಚಲಾಯಿಸುತ್ತಿರುವ ಚಾಲಕರಿಗೆ ದಂಡ ವಿಧಿಸುತ್ತಿರುವುದು ಕಂಡುಬರುತ್ತಿದೆ.
ಸುಳ್ಯ ಪೊಲೀಸ್ ಠಾಣೆಗೆ ಉಪನಿರೀಕ್ಷಕರಾಗಿ ನೂತನವಾಗಿ ಕರ್ತವ್ಯಕ್ಕೆ ಬಂದಿರುವ ಈರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಪ್ರತಿನಿತ್ಯ ಸುಳ್ಯ ನಗರದ ಬೇರೆ ಬೇರೆ ಕಡೆಗಳಲ್ಲಿ ನಿಂತು ತಪಾಸಣಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿರುವ ಎಸ್ ಐ ಈರಯ್ಯರವರು ರಸ್ತೆ ಸುರಕ್ಷತೆಯನ್ನು ಪಾಲಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಈ ಕ್ರಮ ಕೈಗೊಂಡಿದ್ದು ನಿರಂತರವಾಗಿ ತಪಾಸಣಾ ಕಾರ್ಯ ನಡೆಸುವುದರಿಂದ ದಾಖಲೆಗಳಿಲ್ಲದೆ ಮತ್ತು ರಸ್ತೆ ನಿಯಮ ಪಾಲಿಸದೆ ವಾಹನ ಚಲಾಯಿಸುವ ಚಾಲಕರಿಗೆ ಜಾಗೃತಿಯ ಅರಿವು ಉಂಟಾಗಲಿ ಎಂದು ಈ ಕೆಲಸವನ್ನು ಮಾಡುತ್ತಿದ್ದು ಸಾರ್ವಜನಿಕರು ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಬೇಕೆಂದು ಕೇಳಿಕೊಂಡಿದ್ದಾರೆ.