ವಿಕಸಿಸುತ್ತಿರುವ ವೈಜ್ಞಾನಿಕ ಶೋಧನೆಗಳೊಂದಿಗೆ ಶಾಲೆಗಳ ಪ್ರಯೋಗಾಲಯಗಳೂ ಸಂಪನ್ನಗೊಳ್ಳ ಬೇಕು. ನಮ್ಮ ಶಾಲೆಯ ಕನ್ನಡದ ಬಡ ವಿದ್ಯಾರ್ಥಿಗಳಿಗೆ ಪೋಷಕರಾಗಿ ಸಹಕರಿಸುತ್ತಿರುವ ಬೆಂಗಳೂರಿನ ಇಂಜಿನಿಯರ್ಸ್ ಶ್ರೀ ಶಂಭು ನಶಿಪುಡಿಯವರ ತಂಡದವರು ಇಂದು ಉದಾರವಾಗಿ ನಮ್ಮ ಶಾಲಾ ಪ್ರಯೋಗಾಲಯಕ್ಕೆ ರೋಬೋಟ್ ಉಪಕರಣಗಳನ್ನು ನೀಡಿರುವುದರಿಂದ ನಮ್ಮ ಶಾಲೆಯ ಶೈಕ್ಷಣಿಕ ಸೌಲಭ್ಯಗಳು ಶ್ರೀಮಂತಗೊಂಡಿವೆ ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಮುಂದುವರಿದು ಮಾತಾಡಿದ ಅವರು, “ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಬೇಕು. ಮಾತೃ ಭಾಷೆಯಲ್ಲಿ ಕಲಿತದ್ದು ಸರಳವಾಗಿ ಅರ್ಥವಾಗುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ. ಶಿಕ್ಷಣವೆಂದರೆ ಜ್ಞಾನವನ್ನು ತುಂಬಿಸುವುದಿಲ್ಲ. ಅದು ಬೆಳೆಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಶಿಕ್ಷಣದಲ್ಲಿ ಸಾಮರ್ಥ್ಯ ತೋರಿಸಿದರೆ ಗುರುತಿಸಿ ಪ್ರೋತ್ಸಾಹಿಸುವ ಸಮಾಜ ನಮ್ಮ ಸುತ್ತಲೂ ಇದೆ” ಎಂದರು.
ಅವರು ಜು. ೧ ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ನೇಹಶಿಲಾ ಪತ್ರಿಕೆಯ ಉದ್ಘಾಟನೆ ಮತ್ತು ರೋಬೋಟಿಕ್ ಕಿಟ್ ಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರೋಬೋಟಿಕ್ ಕಿಟ್ ಗಳನ್ನು ವಿತರಿಸಲು ಆಗಮಿಸಿದ್ದ ಶಂಭು ನಶಿಪುಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೊಬೋಟಿಕ್ ಕಿಟ್ ಗಳ ಹಸ್ತಾಂತರದ ಬಳಿಕ ಮಾತನಾಡಿದ ಅವರು “ಹೆಚ್ಚಿನ ಶಾಲೆಗಳಲ್ಲಿ ಕೇವಲ ಓದುವುದರ ಕಡೆಗೆ ಗಮನಹರಿಸಲಾಗುತ್ತದೆ. ಸ್ನೇಹದಲ್ಲಿ ವಿಶಿಷ್ಟ ರೀತಿಯಲ್ಲಿ ಕಲಿಕೆಗೆ ಪ್ರೋತ್ಸಾಹವಿರುವುದು ಪ್ರಶಂಸನೀಯ” ಎಂದರು. ಸ್ನೇಹದ ಪ್ರಯೋಗಾತ್ಮಕ ಕಲಿಕೆಗೆ ಸಹಕರಿಸುವುದಾಗಿ ತಿಳಿಸಿದ ಇವರು ರೋಬೋಟಿಕ್ ಕಿಟ್ ಗಳ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಬಳಿಕ ಮಾತನಾಡಿದ ಗಿರೀಶ್ ಜಗಜಂಪಿ ಯವರು ” ನಿಸರ್ಗವನ್ನು ಉಳಿಸಿಕೊಂಡು ಶಿಕ್ಷಣವನ್ನು ನೀಡುವಂತಹ ಈ ವ್ಯವಸ್ಥೆ ಅತ್ಯುತ್ತಮವಾದದ್ದು. ನಿಸರ್ಗವನ್ನು ಹೊರತಾಗಿ ಏನೂ ಇಲ್ಲ. ಈ ಪ್ರಕೃತಿ ಮಡಿಲಲ್ಲಿ ಚೆನ್ನಾಗಿ ಕಲಿಯಿರಿ” ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಸತೀಶ್ ರವರು ಅಮೇರಿಕಾ ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ತುಲನಾತ್ಮಕ ವಿಷಯಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಜಯಂತಿ ಕೆ ವಂದಿಸಿದರು. ಶಿಕ್ಷಕಿ ಶ್ರೀದೇವಿ ಪಿಎಸ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.