ಕೊಡಗು ಸಂಪಾಜೆ: ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ

0

ಲೋಕಸಭಾ ಚುನಾವಣೆ ದೇಶದ ಭವಿಷ್ಯದ ಚುನಾವಣೆ ಎಂಬ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು: ಸಂಸದ ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಅವರೇ ಮುಂದಿನ ಲೋಕಸಭಾ ಅಭ್ಯರ್ಥಿ: ಕೆ.ಜಿ. ಭೋಪಯ್ಯ

ಯಾರು ಏನೇ ಹೇಳಲಿ ಮುಂದಿನ ಲೋಕಸಭಾ ಚುನಾವಣೆಗೆ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಪ್ರತಾಪ್ ಸಿಂಹ ಅವರೇ ನಮ್ಮ ಅಭ್ಯರ್ಥಿ ಎಂಬ ನಿಟ್ಟಿನಲ್ಲಿ ಕಾರ್ಯಕರ್ತರು ದುಡಿಯಬೇಕಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಚಿತ ಗ್ಯಾರಂಟಿ ಎಂದು ಹೇಳಿ ಮತ ಪಡೆದುಕೊಂಡ ಕಾಂಗ್ರೆಸ್ ಈಗ ಜನರಿಗೆ ಮೋಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತ ನಾಯಕರನ್ನು ಸಮರ್ಥವಾಗಿ ಎದುರಿಸಬಲ್ಲ ಪ್ರತಾಪ್ ಸಿಂಹ ಅವರೇ ಮತ್ತೊಮ್ಮೆ ನಮ್ಮ ಮುಂದಿನ ಸಂಸದರಾಗಬೇಕಾಗಿದೆ ಎಂದು ಮಾಜಿ ಶಾಸಕ ಕೆ‌.ಜಿ‌. ಭೋಪಯ್ಯ ಅವರು ಹೇಳಿದರು.

ಕೊಡಗು ಸಂಪಾಜೆ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ, ಮತದಾರರ, ಚುನಾಯಿತ ಪ್ರತಿನಿಧಿಗಳ ಸಭೆಯು ಸಂಪಾಜೆಯ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಶ್ರೀ ಬಾಲಚಂದ್ರ ಕಳಗಿ ವೇದಿಕೆಯಲ್ಲಿ ಜು.1ರಂದು ಅಪರಾಹ್ನ ಜರುಗಿತು.

ಕೊಡಗು ಸಂಪಾಜೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುಂದರ ಚಿಟ್ಟೆಕಾನ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಮೈಸೂರು – ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರು ದೀಪಬೆಳಗಿಸಿ, ಉದ್ಘಾಟಿಸಿದರು.

ವೇದಿಕೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಭೋಪಯ್ಯ, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ, ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನ್, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ತಾಲೂಕು ಅಧ್ಯಕ್ಷ ಅಶ್ವಿನ್ ಕಾಂಗಿರಾ, ಪೆರಾಜೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಬಿಜೆಪಿ ಮಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಕೊಡಗು ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್, ಬಿಜೆಪಿ ಕೊಡಗು ಜಿಲ್ಲಾ ಕಾರ್ಯದರ್ಶಿ

ಪ್ರಸನ್ನ ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ರವಿ, ಮಡಿಕೇರಿ ಗ್ರಾಮಾಂತರ ಮಂಡಲ ಪ್ರಮುಖರಾದ ಗಿರೀಶ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ರಮಾದೇವಿ ಕಳಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಪಾಜೆ ಗ್ರಾಮದ ಪ್ರಮುಖ ಬೇಡಿಕೆಗಳನ್ನು ಸಂಸದರ ಗಮನಕ್ಕೆ ತಂದರು.

ಮಾಜಿ ಶಾಸಕ ಕೆ.ಜಿ. ಭೋಪಯ್ಯ ಅವರು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಸಂಪಾಜೆ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಹಿನ್ನಡೆಯಾಗದಂತೆ ಈ ಭಾಗದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಸರಕಾರದ ವತಿಯಿಂದ ಉಚಿತವಾಗಿ ಔಷಧಿ ನೀಡಿದ್ದೆವು. ರಸ್ತೆ ಅಭಿವೃದ್ಧಿಗೂ ಕೋವಿಡ್ ಅಡ್ಡಗಾಲು ಹಾಕಿತ್ತು. ಅರಣ್ಯ ಹಕ್ಕು ಕಾಯಿದೆಯಡಿ ಜನರಿಗೆ ಹಕ್ಕುಪತ್ರ ಕೊಡಬೇಕು. ತಾಲೂಕು ಪಂಚಾಯತಿ ಕೆಡಿಪಿ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರನ್ನು ಮತ್ತೊಮ್ಮೆ ಚುನಾಯಿತಗೊಳಿಸಬೇಕಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣೆಯ ಸಂದರ್ಭದಲ್ಲಿ ನನಗೂ ಪ್ರೀ, ನಿನಗೂ ಪ್ರೀ ಎಲ್ಲರಿಗೂ ಪ್ರೀ ಎಂದು ಹೇಳಿದ್ದರು. ಆದರೆ ಗೆದ್ದ ಬಳಿಕ ಹಂತಹಂತವಾಗಿ ಈಗ ನಿಯಮ ತರುತ್ತಿದ್ದು, ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮವಹಿಸಿ, ದುಡಿಯಬೇಕಾಗಿದೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ ‘ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಯಶಸ್ವಿ ಹತ್ತು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಅಭಿಯಾನ ನಡೆಸುತ್ತಿದೆ.
ಕೊಡಗಿಗೆ ಡಿಪ್ಲೊಮಾ, ಪಾಲಿಟೆಕ್ನಿಕ್ ಕಾಲೇಜು , ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೊಡಗಿನ ಎರಡು ಜನ ಶಾಸಕರು ಸೇರಿ ಮಾಡಿದ್ದರು.
ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ತರಿಸಿ, ಕೆಲಸ ಮಾಡಿದ್ದರು.
ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಚಿತ ಗ್ಯಾರಂಟಿಗಳನ್ನು ಅವರ ಮನೆಯಿಂದ ತಂದು ಕೊಡುತ್ತಾರಾ.. ಎಂದು ಪ್ರಶ್ನಿಸಿದ ಅವರು ಕೇಂದ್ರ ಸರಕಾರದಿಂದ ಮೋದೀಜಿಯವರು ಐದು ಕೆ.ಜಿ. ಅಕ್ಕಿಯನ್ನು ಬಡವರಿಗೆ ಪ್ರತೀ ತಿಂಗಳು ವಿತರಿಸುತ್ತಿದ್ದಾರೆ. ಇದು ಸಿದ್ಧರಾಮಯ್ಯ ನೀಡುವ ಅಕ್ಕಿ ಅಲ್ಲ ಎಂಬುದನ್ನು ಜನಸಾಮಾನ್ಯರಿಗೆ ಪಕ್ಷದ ಕಾರ್ಯಕರ್ತರು ತಿಳಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದರು.

ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹಿಂದೆ ಮಾಡಿದ ತಪ್ಪನ್ನು ಮಾಡಬಾರದು. ಪಕ್ಕದ ಸುಳ್ಯದಲ್ಲಿ ಪಕ್ಷ ಸಾಮಾನ್ಯ ಕಾರ್ಯಕರ್ತೆಗೆ ಟಿಕೆಟ್ ನೀಡಿದಾಗ ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಆದರೆ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಸಣ್ಣ ಅಂತರದಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆ ಪ್ರತಾಪ್ ಸಿಂಹನ ಭವಿಷ್ಯದ ಚುನಾವಣೆ ಅಲ್ಲ. ಅದು ದೇಶದ ಭವಿಷ್ಯದ ಚುನಾವಣೆ ಎಂದು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯಕರ್ತರು ದುಡಿಯಬೇಕು.
ರಾಜ್ಯದಲ್ಲಿ ಈಗಿರುವ ಸರ್ಕಾರ ಐದು ವರ್ಷ ಪೂರ್ತಿಗೊಳಿಸುತ್ತದೆ ಎಂಬ ನಂಬಿಕೆ ನನಗಿಲ್ಲ. ಆದರೆ ಐದು ವರ್ಷ ಪೂರ್ತಿಗೊಳಿಸಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಮತ ಕೇಳಲು ಬರುವಾಗ ಮನೆ ಮನೆಗಳಲ್ಲಿ ಜನರು ಪೊರಕೆ ಹಿಡಿದು ಕಾಯುತ್ತಿರುತ್ತಾರೆ ಎಂದು ಹೇಳಿದರು. ಗ್ರಾ.ಪಂ. ಸದಸ್ಯ ಕುಮಾರ ಚೆದ್ಕಾರ್ ಸ್ವಾಗತಿಸಿ, ಗ್ರಾ.ಪಂ.ಸದಸ್ಯ ಜಗದೀಶ್ ಅವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.