ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ

ಕನ್ನಡ ಪತ್ರಿಕಾ ರಂಗದ ಪಿತಾಮಹ ಡಾ.ಮೋಗ್ಲಿಂಗ್ ಹೆಸರನ್ನು ವೃತ್ತ ಅಥವಾ ರಸ್ತೆಗೆ ಇರಿಸಲು ಒತ್ತಾಯ

0

ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರದ ನೆನಪಿನಲ್ಲಿ ಅಧಿಕೃತವಾಗಿ ಜುಲೈ 1 ರಂದು ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಈ ಪತ್ರಿಕೆಯ ಸ್ಥಾಪಕ ಹಾಗೂ ಸಂಪಾದಕ ಡಾ.ಹರ್ಮನ್ ಮ್ಯೋಗ್ಲಿಂಗ್ ಅವರ ಹೆಸರನ್ನು ಅವರು ಓಡಾಡಿದ ಮಂಗಳೂರಿನ ರಸ್ತೆಗೆ ಅಥವಾ ವೃತ್ತವೊಂದಕ್ಕೆ ಇರಿಸಿ ಜನರು ಅವರ ಸಾಧನೆಯನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡಬೇಕೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಒತ್ತಾಯಿಸಿದೆ.

ಜು.1 ರಂದು ಯೂನಿಯನ್ ವತಿಯಿಂದ ಮಂಗಳೂರಿನ ಬಲ್ಮಠದಲ್ಲಿ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿರುವ ರೆ.ಫಾ.ಡಾ.ಮೋಗ್ಲಿಂಗ್ ರವರ ಪ್ರತಿಮೆಗೆ ಮಾಲಾರ್ಪಣೆಗೈದು ಆಚರಿಸಲಾದ ಪತ್ರಿಕಾ ದಿನಾಚರಣೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.
” ಮೋಗ್ಲಿಂಗ್ ಜೀವನ ಚರಿತ್ರೆಯನ್ನು ಜನತೆಯ ಮುಂದಿಡುವ ಕೆಲಸ ನಡೆಯಬೇಕು” ಎಂದು ಮುಖ್ಯಾತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಹೇಳಿದರು.

” 180 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಸವಾಲುಗಳ ನಡುವೆ ಪತ್ರಿಕೆ ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಸಾಧನೆ , ಶಾಲೆಗಳನ್ನು ಆರಂಭಿಸಿದ ಅವರ ಸೇವಾ ಬದ್ಧತೆ ಸ್ಮರಣಾರ್ಹ” ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್ ಅವರು ಮಾತನಾಡಿ, ” ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರಿನಲ್ಲಿ ಮಂಗಳೂರಿನಲ್ಲಿ ಯಾವುದೇ ಸ್ಮಾರಕಗಳು ಇಲ್ಲದೇ ಇರುವುದರಿಂದ ನಗರದ ರಸ್ತೆಯೊಂದಕ್ಕೆ ಹಾಗೂ ವೃತ್ತವೊಂದಕ್ಕೆ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರು ಇರಿಸಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈದಿನ ಡಾಟ್ ಕಾಮ್ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಹೆಚ್ ಶುಭಕೋರಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮುತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಮಾತನಾಡಿ, ” ಕನ್ನಡ ಪತ್ರಿಕಾ ರಂಗದ ಪುಣ್ಯಭೂಮಿಯಾದ, ಮಂಗಳೂರು ಸಮಾಚಾರ ಪತ್ರಿಕೆ ಉದಯಿಸಿದ ಸ್ಥಳದಲ್ಲಿಯೇ ಮ್ಯೋಗ್ಲಿಂಗ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಯೂನಿಯನ್ ಪ್ರತಿವರ್ಷ ನಡೆಸುತ್ತಿದೆ. ಇಡೀ ಕನ್ನಡ ಪತ್ರಿಕಾರಂಗದ ಪಿತಾಮಹರಾದ ಡಾ.ಮೋಗ್ಲಿಂಗ್ ರವರ ಹೆಸರನ್ನು ಮಂಗಳೂರಿನ ಒಂದು ವೃತ್ತಕ್ಕೆ ಅಥವಾ ರಸ್ತೆಗೆ ಇರಿಸುವ ಕಾರ್ಯವನ್ನು ಆಡಳಿತ ನಡೆಸುವವರು ಮಾಡಬೇಕು” ಎಂದರು.

ಪ್ರತಿಜ್ಞೆ ಸ್ವೀಕಾರ

ಸರಿಯಾದ ಸುದ್ದಿ ಕೊಡುವುದು ಹೇಗೆ ಪತ್ರಿಕೆಗಳ ಕರ್ತವ್ಯವೋ ಅದೇ ರೀತಿ, ಉತ್ತಮ ಮಾರ್ಗದತ್ತ ಜನತೆ ಸಾಗುವಂತೆ ಪ್ರೇರೇಪಿಸುವುದೂ ಪತ್ರಿಕೆಗಳ ಬದ್ಧತೆಯಾಗಿರಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸುದ್ದಿ ಬಿಡುಗಡೆಯ ಡಾ.ಯು.ಪಿ.ಶಿವಾನಂದರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದೆ” ಎಂದು ಹೇಳಿದ ಹರೀಶ್ ಬಂಟ್ವಾಳ್ ರವರು ಲಂಚ ಭ್ರಷ್ಟಾಚಾರ ವಿರುದ್ಧದ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಘೋಷಣೆಯನ್ನು ಭೋದಿಸಿದರು. ಅತಿಥಿಗಳಾದಿಯಾಗಿ ಅಲ್ಲಿ ಸೇರಿದವರೆಲ್ಲರೂ ಪ್ರತಿಜ್ಞೆ ಸ್ವೀಕರಿಸಿದರು.
ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ರೆ.ಫಾ.ಡಾ.ಮೋಗ್ಲಿಂಗ್ ರವರು ಮಾಡಿದ ಪತ್ರಿಕಾ ಕಾರ್ಯ, ಭಜನೆಗಳ ಸಂಗ್ರಹ ಕಾರ್ಯ, ಗಾದೆಗಳ ಸಂಗ್ರಹ ಕಾರ್ಯಗಳ ಬಗ್ಗೆ ವಿವರಿಸಿದರು. ಯೂನಿಯನ್ ಪದಾಧಿಕಾರಿಗಳಾದ ಈಶ್ವರ್ ವಾರಾಣಸಿ, ಗಿರಿಧರ್ ಶೆಟ್ಟಿ , ಹಮೀದ್ ವಿಟ್ಲ ಮತ್ತಿತರರು ಭಾಗವಹಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶುಭೋದಯ ಆಳ್ವ, ಯೋಗೀಶ್ , ಶಾಂತಲಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.