ಸಮಸ್ಯೆ ಸರಿಪಡಿಸಲು ಊರವರ ಮನವಿ
ಮಂಡೆಕೋಲು ಗ್ರಾಮದ ಮಾರ್ಗ ಶಾಲೆಯ ಮುಂಭಾಗವಾಗಿ ಕೇನಾಜೆಗೆ ಹೋಗುವ ರಸ್ತೆಯ ಮಧ್ಯೆ ಅಕೇಶಿಯ ಮರವೊಂದು ಮುರಿದು ಬಿದ್ದು ವಿದ್ಯುತ್ ತಂತಿಯ ಮೇಲೆ ನೇತಾಡುತ್ತಿದೆ. ಈ ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರು, ಶಾಲಾ ಮಕ್ಕಳು ಪ್ರತೀ ನಿತ್ಯ ಸಂಚರಿಸುತ್ತಿದ್ದು, ಮರ ಬೀಳುವ ಸ್ಥಿತಿಯಲ್ಲಿ ಇರುವುದರಿಂದ ಭಯದಿಂದಲೇ ಸಂಚರಿಸುವಂತಾಗಿದೆ.
ಈ ಸಮಸ್ಯೆಯನ್ನು ಮನಗಂಡು ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಯ ಮೇಲೆ ಇರುವ ಮರವನ್ನು ತೆರವು ಮಾಡಿ ಸಂಭವಿಸಬಹುದಾದ ಅಪಾಯವನ್ನು ತಡೆಯುವಂತೆ ಊರವರು ಒತ್ತಾಯಿಸಿದ್ದಾರೆ.