ಸುಳ್ಯದ
ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 22 ನೇ ಶಾಖೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೋಮಂತಡ್ಕದಲ್ಲಿ ಜು.9 ರಂದು ಭಾನುವಾರ ನೆರವೇರಿತು. ನೂತನ ಶಾಖೆಯನ್ನು ಸೋಮಂತಡ್ಕದ ಡಿಸೋಜಾ ಕಾಂಪ್ಲೆಕ್ಸ್ ನಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು.
ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಎಂಎಲ್ಸಿ ಹರೀಶ್ ಕುಮಾರ್ ರವರು ” ಹಲವಾರು ಸಾಮಾಜಿಕ ಅಭಿವೃದ್ಧಿಯ ಧ್ಯೇಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಾದರಿ ಮತ್ತು ಆದರ್ಶ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ. ಶ್ರಮದಿಂದ ಯಶಸ್ಸು ಸಾಧ್ಯ ಎನ್ನುವುದಕ್ಕೆ ಇದು ಉತ್ತಮ ನಿದರ್ಶನ. ಹಣಕಾಸು ಸಂಸ್ಥೆಗಳು ಹೆಚ್ಚಿದಷ್ಟು ಆ ಪ್ರದೇಶದ ಆರ್ಥಿಕ ವ್ಯವಹಾರಗಳು ಅಧಿಕಗೊಳ್ಳುತ್ತವೆ. ವಾಣಿಜ್ಯ ಬ್ಯಾಂಕುಗಳಲ್ಲಿ ಹೊರರಾಜ್ಯದ ಸಿಬ್ಬಂದಿಗಳೇ ಅಧಿಕ ಸಂಖ್ಯೆಯಲ್ಲಿದ್ದು, ಅಲ್ಲಿ ಭಾಷೆಗಳಿಗೆ ಪ್ರಾಶಸ್ತ್ಯ ನೀಡದ ಕಾರಣ ಜನರು ಸಹಕಾರಿ ಕ್ಷೇತ್ರಗಳತ್ತ ಸಹಜವಾಗಿ ಆಕರ್ಷಿತರಾಗುತ್ತಿದ್ದಾರೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ “25 ವರ್ಷಗಳ ಹಿಂದೆ ಆರಂಭವಾದ ಸಂಘ 22ನೇ ಶಾಖೆಯನ್ನು ಇದೀಗ ತೆರೆದಿದ್ದು, ರಜತ ವರ್ಷದ ಅಂತ್ಯದೊಳಗೆ ಇದನ್ನು 25 ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ರಾಜ್ಯಾದ್ಯಂತ ಸಂಘಕ್ಕೆ 17,034 ಸದಸ್ಯರಿದ್ದು ಪ್ರಗತಿಪಥದಲ್ಲಿ ಸಂಘ ಮುಂದುವರೆದಿದೆ” ಎಂದರು.
ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಪೋಷಕರಾದ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಮರೈನ್ ನ ನಿವೃತ್ತ ಮುಖ್ಯ ಇಂಜಿನಿಯರ್ ಡಿ.ಯಂ.ಗೌಡ, ಮುಂಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಂಜಿನಿ ಆರ್., ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಚಂದ್ರಕಾಂತ್, ಡಿಸೋಜಾ ಕಾಂಪ್ಲೆಕ್ಸ್ ಮಾಲಕ ಹೆನ್ರಿ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥ ರಾಮ, ಚಂದ್ರಾ ಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್, ಶ್ರೀಮತಿ ಜಯಲಲಿತಾ ಕೆ.ಎಸ್, ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಲತಾ ಎಸ್. ಮಾವಜಿ, ಹೇಮಚಂದ್ರ ಐ.ಕೆ, ನವೀನ್ ಕುಮಾರ್ ಜೆ.ವಿ. ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಟಿ. ವಿಶ್ವನಾಥ್, ಬ್ರಾಂಚ್ ಮ್ಯಾನೇಜರ್ ಯೋಗೀಶ್ ಹಾಗೂ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಗ್ರಾಹಕರಿಗೆ ಪ್ರಥಮ ಪಾಲು ಪತ್ರ, ಪ್ರಥಮ ಠೇವಣಿ ಪತ್ರ, ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಲಾಯಿತು.
ಸಹಕಾರಿ ಕ್ಷೇತ್ರಗಳಿಂದ ಆರ್ಥಿಕ ಸಂಕಷ್ಟ ನಿವಾರಣೆ : ಶಾಸಕ ಹರೀಶ್ ಪೂಂಜ
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಶ್ರೀ ವೆಂಕಟರಮಣ ಕೋ- ಆಪರೇಟಿವ್ ಸೊಸೈಟಿ ಐದನೇ ಶಾಖೆ ಬೆಳ್ತಂಗಡಿಯಲ್ಲಿ ಆರಂಭವಾಗಿರುವುದು ಇಲ್ಲಿನ ಆರ್ಥಿಕ ವ್ಯವಹಾರ ಸದೃಢವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಹಕಾರ ಕ್ಷೇತ್ರ ಗ್ರಾಹಕರಿಗೆ ತ್ವರಿತ ಸ್ಪಂದನೆ ನೀಡುವುದರ ಜತೆ ಹಣಕಾಸು ವ್ಯವಹಾರಗಳಿಗೆ ದಾಖಲೆಗಳಿಗಿಂತ ವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಸಹಕಾರಿ ಕ್ಷೇತ್ರವು ಜನಸಾಮಾನ್ಯರಿಗೆ, ರೈತರ ಅನುಕೂಲಕ್ಕೆ ಉತ್ತಮ ಯೋಜನೆಗಳನ್ನು ರೂಪಿಸುತ್ತಾ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತಿದೆ ಎಂದು ಹೇಳಿದರು.