ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಅಪೂರ್ವ ಸೇವೆ

0

“ರಜತ ಸೇವಾ ಯೋಜನಾಧಿಕಾರಿ” ಸಂಜೀವ ಕುದ್ಪಾಜೆಯವರಿಗೆ ಅಭಿದಾನ ಗೌರವ

ಕಿನ್ನಿಗೋಳಿ: ಪೊಂಪೈ ಕಾಲೇಜು, ಐಕಳದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ಘಟಕಗಳ 2022-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವು ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯದ ನೆಹರು ಸ್ಮಾರಕ ಕಾಲೇಜಿನಲ್ಲಿ ಕಳೆದ 26 ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಜೀವ ಕುದ್ಪಾಜೆಯವರು 25ನೇ ವಾರ್ಷಿಕ ವಿಶೇಷ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿರುವ ಸಲುವಾಗಿ ಮತ್ತು ಅವರ ದಾಖಲೆಯ ಸೇವಾ ಚಟುವಟಿಕೆಗಳನ್ನು ಪರಿಗಣಿಸಿ, “ರಜತ ಸೇವಾ ಯೋಜನಾಧಿಕಾರಿ” ಎಂಬ ಅಭಿದಾನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ.ವಿ.ಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಕುದ್ಪಾಜೆಯವರ ಸೇವಾ ಕೈಂಕರ್ಯವನ್ನು ಅಭಿನಂದಿಸಿ ಮಾತನಾಡಿದರು.

NSS ಕಾರ್ಯಕ್ರಮ ಅಧಿಕಾರಿ ನೇಮಿಚಂದ್ರ ಗೌಡರು ‘ಸಂಮಾನ ಪತ್ರ’ ವನ್ನು ವಾಚಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಯೋಗೀಂದ್ರ ಬಿ.ಯವರು ಮುಖ್ಯ ಅತಿಥಿಯಾಗಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್, NSS ಮತ್ತು RRC ಘಟಕ ನಾಯಕರುಗಳಾದ ಕು. ಸ್ವಾತಿ ಪ್ರಭು, ವಿಧುರಾ‍ಜ್, ಲೆಸ್ಟನ್ ಡಿ’ಸೋಜಾ ಮತ್ತು ಕು. ಸುಲೋಚನಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜು NSS ಘಟಕದ ಎಲ್ಲಾ ಚಟುವಟಿಕೆಗಳಲ್ಲಿ ವಿಶೇಷ ಸೇವೆ-ಸಾಧನಗಳನ್ನು ಮಾಡಿದ ನವೀನ್ ಕುಲಾಲ್, ಧೀರಜ್ ಶೆಟ್ಟಿಗಾರ್, ಅಪೇಕ್ಷಾ, ಮಧುಶ್ರೀ, ಸ್ವಾತಿಪ್ರಭು, ಜೀತಶ್ರೀ, ಲೆಸ್ಟನ್ ಡಿ’ಸೋಜಾ, ಸುದೀಪ್, ಪ್ರಥಮ್ ಶೆಟ್ಟಿ, ಮತ್ತು ಯೋಗಾನಂದ ಸೇರಿದಂತೆ ಒಟ್ಟು ಹತ್ತು ಜನ ಅತ್ಯುತ್ತಮ ಸ್ವಯಂಸೇವಕರನ್ನೂ ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಕಾಲೇಜು ಕಛೇರಿ ಸಹಾಯಕ ಸಿಬ್ಬಂದಿ ಶ್ರೀ ಥೋಮಸ್ ಡಿ’ಸೋಜಾರವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಕು. ಸಾನಿಯಾ ಮತ್ತು ತಂಡದವರು ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕು. ರೇಶ್ಮಾ ವಂದಿಸಿದರು. ಕು. ನಿಖಿತಾ ಕಾರ್ಯಕ್ರಮ ನಿರೂಪಿಸಿದರು.