ಡಾಮರು ಕಿತ್ತು ಹೋಗಿರುವ ಪೈಲಾರು- ನಾಯರ್ ಕಲ್ಲು ಸಂಪರ್ಕದ ರಸ್ತೆಯ ಅವಸ್ಥೆ

0

ತೀರಾ ಹದಗೆಟ್ಟ ರಸ್ತೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ಪ್ರಯಾಣಿಕರು

ಅಮರಮುಡ್ನೂರು ಗ್ರಾಮದ ಪೈಲಾರಿನಿಂದ ಮುಂದುವರಿದರೆ ನಾಯರ್ ಕಲ್ಲು, ಕಡಪಳ, ಮೂಕಮಲೆ ಮುಂತಾದ ಕಡೆಗಳಿಗೆ ಸಂಪರ್ಕ ‌ಕಲ್ಪಿಸುವ ಬಹಳ ಪ್ರಾಮುಖ್ಯ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಬಹಳ ತ್ರಾಸದಾಯಕವಾಗಿದೆ.

ಕಳೆದ ಹಲವಾರು ವರ್ಷಗಳ ಹಿಂದೆ ಹಾಕಿದ ಡಾಮರು ಅಲ್ಲಲ್ಲಿ ಎದ್ದು ಹೋಗಿ ಹೊಂಡ ಗುಂಡಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಮನೆಗಳಿದ್ದು ದಿನ ನಿತ್ಯ ವಿದ್ಯಾಭ್ಯಾಸಕ್ಕಾಗಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಇದೊಂದೇ ರಸ್ತೆಯ ಮೂಲಕ ಸಂಚರಿಸುತ್ತಿರುವ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಡಾಮರು ಕಿತ್ತು ಹೋಗಿರುವ ರಸ್ತೆಯಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತ್ರಾಸದಾಯಕವಾಗಿದೆ. ಮಳೆ ಬರುವ ಸಂದರ್ಭದಲ್ಲಿ ನೀರು ರಸ್ತೆಯಲ್ಲೆ ಹರಿಯುವುದು. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ‌.
ಸಂಬಂಧ ಪಟ್ಟ ಜನಪ್ರತಿನಿಧಿಗಳು‌ ಹಾಗೂ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ರಸ್ತೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.