ವರದಿ: ಆದಿತ್ಯ ರಾವ್ ದೊಂಡೋಲೆ
ಬಾಳಿಲ: ಕಾರ್ಗಿಲ್ ಯುದ್ಧ ನಡೆದು ಜುಲೈ 26ಕ್ಕೆ 24 ವರ್ಷ ಪೂರ್ಣಗೊಂಡಿದೆ. ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನದ ಸಂಭ್ರಮ 25ನೇ ವರ್ಷಕ್ಕೆ ಕಾಲಿರಿಸಿದೆ. ಈ ವಿಜಯೋತ್ಸವದ ಸವಿನೆನಪಿಗಾಗಿ ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ದೇಶಾದ್ಯಂತ ಜುಲೈ 26ರಂದು ಆಚರಿಸಲಾಗುತ್ತಿದೆ. ಇಂತಹ ಸುದಿನದಂದು ನಿವೃತ್ತ ಯೋಧರಾಗಿರುವ ಬೆಳ್ತಂಗಡಿಯಲ್ಲಿ ನೆಲೆಸಿರುವ ಬಾಳಿಲ ಗ್ರಾಮದ ಗೋಪಾಲಕೃಷ್ಣ ಕಾಂಚೋಡು ಅವರು ಭಾರತಮಾತೆಯ ಸೇವೆಗೈದ ಸೈನಿಕರ ಕುರಿತು ‘ಸುದ್ದಿ’ಯೊಂದಿಗೆ ಮಾತನಾಡಿದ್ದಾರೆ. ಜತೆಗೆ ತನ್ನ ದೇಶ ಸೇವೆಯ ಕುರಿತೂ ಮೆಲುಕು ಹಾಕಿದ್ದಾರೆ.
ಕಾರ್ಗಿಲ್ ಯುದ್ಧದ ವಿಜಯೋತ್ಸವ: 1999 ಮೇ ತಿಂಗಳಿನಲ್ಲಿ ಆರಂಭವಾದ ಭಾರತ-ಪಾಕಿಸ್ಥಾನ ನಡುವಿನ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ಅಂದರೆ ಸುಮಾರು ಎರಡು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು. ಕಾರ್ಗಿಲ್ ವಿಜಯೋತ್ಸವದ ಈ ದಿನವನ್ನು ಪ್ರತಿ ಭಾರತೀಯನೂ ಕಾರ್ಗಿಲ್‌ನಲ್ಲಿ ಹೋರಾಡಿದ ವೀರಾಗ್ರಣಿಗಳನ್ನು ನೆನಪಿಸಿಕೊಳ್ಳವ ದಿನವಾಗಿದೆ. ಇಂತಹ ವಿಶೇಷ ದಿನದಂದು ನಮ್ಮ ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತರಾಗಿರುವ ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ನಿವೃತ್ತ ಸೇನಾನಿ ಗೋಪಾಲಕೃಷ್ಣ ಕಾಂಚೋಡು ಅವರು ‘ಸುದ್ದಿ’ಯೊಂದಿಗೆ ತನ್ನ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ಮಹತ್ವ: ಸೈನ್ಯದಲ್ಲಿ ನಡೆಸುವ ಕಾರ್ಯಾಚರಣೆಗೆ ಒಂದೊಂದು ಹೆಸರನ್ನು ಸೂಚಿಸುತ್ತಾರೆ. ಕಾರ್ಗಿಲ್ ಯುದ್ಧ ಕೊನೆಗೊಂಡು ಪಾಕಿಸ್ತಾನದ ವಿರುದ್ಧ ಭಾರತ ಜಯಶಾಲಿಯಾದ ನೆನಪಿಗೆ ಹಾಗೂ ಈ ಯುದ್ದದಲ್ಲಿ ಅನೇಕ ವೀರರು ಭಾರತಮಾತೆಗೆ ತಮ್ಮ ಪ್ರಾಣವನ್ನು ಅರ್ಪಿಸಿದ ಕಾರಣ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಸರ್ಕಾರದ ಪರವಾಗಿ ಕೆಲಸ ಮಾಡುವುದನ್ನು ಸರಕಾತಿ ನೌಕರಿ ಎಂದು ಹೇಳುತ್ತೇವೆ. ಅದರೆ ಸೈನಿಕರ ಕೆಲಸ ನೌಕರಿ ಅಲ್ಲ, ಬದಲಾಗಿ ಅದು ದೇಶ ಸೇವೆ. ಗಂಟೆ ಲೆಕ್ಕದಲ್ಲಿ ಕೆಲಸ ಮಾಡುವ ವೃತ್ತಿ ಸೈನಿಕನದ್ದಲ್ಲ. ಸೈನಿಕನಾದವರು ದಿನದ 24 ಗಂಟೆಯೂ ಕೆಲಸ ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಗಿಲ್ ಗುಡ್ಡಗಾಡು ಪ್ರದೇಶದ ಗಡಿರೇಖೆಯನ್ನು ಉಲ್ಲಂಸಿ ಪಾಕ್ ಸೈನ್ಯ ಒಳಗೆ ಪ್ರವೇಶಿಸಿದನ್ನು ತಿಳಿದ ಸೈನ್ಯ ಸರ್ಕಾರದ ಮೂಲಕ ಯುದ್ಧವನ್ನು ಕೈಗೊಂಡು ಅನೇಕ ಸೈನಿಕರ ಶ್ರಮದ ಫಲದಿಂದ ಕಾರ್ಗಿಲ್ ಪಾಕ್‌ನಿಂದ ಮುಕ್ತವಾಗಿ ಭಾರತದ ಕೈ ಸೇರಿತು. ಈ ದಿನವನ್ನು ವಿಶೇಷವಾಗಿ ಭಾರತೀಯರು ಹೆಮ್ಮೆಯಿಂದ ಆಚರಿಸುತ್ತಾರೆ ಎಂದು ಗೋಪಾಲಕೃಷ್ಣ ಕಾಂಚೋಡು ತಿಳಿಸಿದ್ದಾರೆ.
ಬೆಳ್ತಂಗಡಿಯ ಹಲವರು ಕಾರ್ಗಿಲ್ ರಣಕಣದಲ್ಲಿ:ಕಾರ್ಗಿಲ್ ಕಾರ್ಯಾಚರಣೆಗಿಂತ ಮೊದಲು ಆಪರೇಷನ್ ರಕ್ಷಕ್ ಎಂಬ ಕಾರ್ಯ ನಡೆದಿದ್ದು ಅದರಲ್ಲಿ ನಾನು ಭಾಗವಹಿಸಿದ್ದೆ. ಬಳಿಕ ನಿವೃತ್ತಿಯಾದೆ. ನಮ್ಮ ತಾಲೂಕಿನಲ್ಲಿ ಅನೇಕ ಸೈನಿಕರು ಕಾರ್ಗಿಲ್ ಕಣದಲ್ಲಿ ಭಾಗಹಿಸಿದ್ದಾರೆ. ಬಂದಾರು ನಿವಾಸಿ ಚಂದಪ್ಪ ಅವರು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ನಮ್ಮ ತಾಲೂಕಿನ ಹೆಮ್ಮೆಯ ವಿರಾಗ್ರಣಿಯಾಗಿದ್ದಾರೆ. ಅವರು ಯುದ್ಧದಲ್ಲಿ ತನ್ನ ಕಾಲು ಕಳೆದುಕೊಂಡಿದ್ದಾರೆ. ಅನೇಕರು ಯುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಗೋಪಾಲಕೃಷ್ಣ ಹೇಳಿದರು.
ಯುವಕರಿಗೆ ಕಾರ್ಗಿಲ್ ಕಾರ್ಯಾಚರಣೆ ಪ್ರೇರಣೆ: ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅದೆಷ್ಟೋ ವೀರಾಧಿವೀರ ಸೈನಿಕರು ಪ್ರಾಣಾರ್ಪಣೆ ಮಾಡಿದ್ದಾರೆ. ಎಲ್ಲರೂ ಇವರನ್ನು ಸ್ಮರಿಸಲೇಬೇಕು. ಕಾರ್ಗಿಲ್ ಸಾಹಸದ ಕತೆ ಯುವಜನತೆಗೆ ಪ್ರೇರಣೆಯಾಗಿದೆ. ಯುವಕರು ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಸೈನ್ಯದಲ್ಲಿಇದೀಗ ಆಧುನಿಕ ಶಸ್ತ್ರಾಸ್ತ್ರಗಳು ಪೂರೈಕೆ ಇದೆ. ಇದರಿಂದ ಭಾರತ ಇನ್ನಷ್ಟು ಬಲಿಷ್ಠವಾಗಲಿದೆ. ಭಾರತ ವಿಶ್ವಗುರುವಾಗಲಿದೆ. ಒಟ್ಟಿನಲ್ಲಿ ಈ ಕಾರ್ಗಿಲ್ ವಿಜಯ್ ದಿವಸ್ ಎಲ್ಲಾ ದೇಶ ಪ್ರೇಮಿಗಳಿಗೂ ಪ್ರೇರಣೆ ಹಾಗೂ ದೇಶಾಭಿಮಾನ ನೀಡಲಿ ಎಂದು ಗೋಪಾಲಕೃಷ್ಣ ಕಾಂಚೋಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.