ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ಸಹಯೋಗದಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ ಗೈಡ್ ದಳಗಳ ಪಟಾಲಂ ನಾಯಕರ ಎರಡು ದಿನಗಳ ತರಬೇತಿ ಶಿಬಿರವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಪಂಜ ಗ್ರಾಮ ಪಂಚಾಯತಿನ ನಿಯೋಜಿತ ಅಧ್ಯಕ್ಷರಾದ ವಿಜಯಲಕ್ಷ್ಮಿರವರ ಅಧ್ಯಕ್ಷತೆಯಲ್ಲಿ ಶಿಬಿರ ನಡೆಯಿತು.
ಮಂಗಳೂರು ಡಯಟ್ ಉಪನ್ಯಾಸಕ, ಸುಳ್ಯ ತಾಲೂಕು ಸ್ಕೌಟ್ ಗೈಡ್ಸ್ ನೋಡಲ್ ಅಧಿಕಾರಿಯಾಗಿರುವ ಪೀತಾಂಬರ ಕೆ. ಉದ್ಘಾಟಿಸಿ, ಸ್ಕೌಟ್ ಗೈಡ್ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪಂಜ ಸ್ಥಳೀಯ ಸಂಸ್ಥೆಯಲ್ಲಿ ಸ್ಕೌಟ್ ಜಿಲ್ಲಾ ಆಯುಕ್ತರ ತರಬೇತಿಯನ್ನು ಪಡೆದ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ. ಕೆ. ಇವರನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ. ಈ. ರಮೇಶ್ ಅಭಿನಂದಿಸಿ, ವಿದ್ಯಾರ್ಥಿಗಳು ಸ್ಕೌಟ್ ಗೈಡ್ ಕಲಿಕಾಂಶಗಳನ್ನು ಈ ತರಬೇತಿಯಲ್ಲಿ ಪಡೆದು ದಳದ ಉಳಿದ ಸದಸ್ಯರಿಗೆ ತಿಳಿಯಪಡಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಗಳಲ್ಲಿ ಸ್ಕೌಟ್ ಗೈಡ್ ದಳ ತೆರೆಯಲು ನಿರ್ದೇಶನ ನೀಡಲಾಗುವುದೆಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಪಂಜ ವಲಯ ಅರಣ್ಯ ಅಧಿಕಾರಿ ಗಿರೀಶ್ ಆರ್ ಭಾಗವಹಿಸಿ ಶುಭ ಹಾರೈಸಿದರು. ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ರೈ, ಪಂಜದ ಪ್ರಗತಿಪರ ಕೃಷಿಕರಾದ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಜೆಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಲೋಕೇಶ್ ಆಕ್ರಿಕಟ್ಟೆ ಶುಭ ಹಾರೈಸಿದರು. ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ, ಪಂಜ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಲೀಲಾ ಕುಮಾರಿ, ಎಸ್ ಡಿಎಂಸಿಯ ಉಪಾಧ್ಯಕ್ಷೆ ಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ಸ್ವಾಗತಿಸಿ, ಸ್ಕೌಟ್ ಜಿಲ್ಲಾ ಸಹಾಯಕ ಆಯುಕ್ತ ದೇವಿಪ್ರಸಾದ್ ಜಾಕೆ ವಂದಿಸಿದ ಉದ್ಘಾಟನಾ ಸಮಾರಂಭವನ್ನು ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ನಿರೂಪಿಸಿದರು.
೯೮ ಸ್ಕೌಟ್ಸ್, ೧೧೭ ಗೈಡ್ಸ್, ೧೧ ರೋವರ್ಸ್, ೧೦ ರೇಂಜರ್ಸ್, ೩೯ ಸ್ಕೌಟ್ ಗೈಡ್ ಶಿಕ್ಷಕರು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರ ನಾಯಕರಾಗಿ ದಾಮೋದರ್ ನೇರಳ ಮತ್ತು ನಳಿನಾಕ್ಷಿ ಸಹಕರಿಸಿದರು.
ಧ್ವಜ ವಂದನೆ, ಪಟಾಲಂ ಪದ್ಧತಿ, ದಳ ಸಭೆ, ಹೈಕಿಂಗ್, ಮೊದಲಾದ ಸ್ಕೌಟಿಂಗ್ ಕೌಶಲ್ಯಗಳೊಂದಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.
ರಾತ್ರಿ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು ಉದ್ಘಾಟಿಸಿದರು. ಮಾಧವ ಬಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಾಗ್ನಿ ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಶರತ್ ಕುದ್ವ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಭಾಗವಹಿಸಿ ಶುಭ ಹಾರೈಸಿದರು. ಸಹಾಯಕ ಕಾರ್ಯದರ್ಶಿ ಶಿವಪ್ರಸಾದ್ ಸ್ವಾಗತಿಸಿ, ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಸೋಮಶೇಖರ ನೇರಳ ವಂದಿಸಿದ ಈ ಕಾರ್ಯಕ್ರಮವನ್ನು ಸತೀಶ್ ನಿರೂಪಿಸಿದರು. ಬಳಿಕ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಸ್ಕೌಟ್ ಶಿಕ್ಷಕರು, ಗೈಡ್ಸ್ ಶಿಕ್ಷಕಿಯರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ವ್ಯವಸ್ಥಾಪನ ಸಮಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ವ್ಯವಸ್ಥಾಪನ ಸಮಿತಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಗ್ರಾಮ ಪಂಚಾಯತ್ ಪಂಜ, ಲಯನ್ಸ್ ಕ್ಲಬ್ ಪಂಜ, ಜೆಸಿಐ ಪಂಜ ಪಂಚಶ್ರೀ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಎರಡು ದಿನಗಳ ಶಿಬಿರದ ಆಯೋಜನೆಗೆ ಸಹಕರಿಸಿದರು.