ಅಗರ್ ನ ಹೊರಗೆ ಬೇಲಿ ಹಾಕಿದರೆಂಬ ದೂರು : ಪಂಚಾಯತ್ ಸುಮ್ಮನಿದ್ದಾರೆಂಬ ಆರೋಪ

0

ಗ್ರಾಮ ವ್ಯಾಪ್ತಿಯ ಸಮಸ್ಯೆಯನ್ನು ಪಂತಾಯತ್ ಗೆ ತಕ್ಷಣ ತಿಳಿಸಿ : ಅಧ್ಯಕ್ಷರು

ಮಂಡೆಕೋಲು ಗ್ರಾಮ ಸಭೆ

ಮಂಡೆಕೋಲು‌ ಗ್ರಾಮ ಸಭೆಯು ಮಂಡೆಕೋಲು ಸಹಕಾರ ಸಂಘದಲ್ಲಿ ಅಧ್ಯಕ್ಷೆ ವಿನುತಾ ಪಾತಿಕಲ್ಲುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಗ್ರಾಮ ಸದಸ್ಯರು, ಅಧಿಕಾರಿಗಳು, ಪಿಡಿಒ ಇದ್ದರು.

ಸಭೆಯಲ್ಲಿ ಅಜಿತ್ ಪೇರಾಲು ಮಾತನಾಡಿ ಉದ್ದಂತಡ್ಕದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜಾಗದ ಅಗರ್ ನಿಂದ ಹೊರಗೆ ಬೇಲಿ‌ಹಾಕಿದ್ದಾರೆ. ಇದು ಪಂಚಾಯತ್ ಗೆ ಗೊತ್ತಿಲ್ಲವೇ. ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು. ಪಿಡಿಒ ರವರು ಯಾವುದು ವಲ್ಲೀಶ ಭಟ್ ರದ್ದ ಎಂದು ಕೇಳಿದಾಗ, ಹೌದು. ಯಾಕೆ ತೆಗೆದಿಲ್ಲ. ಹಾಗಿದ್ದರೆ ಹೇಳಿ ಎಲ್ಲರೂ ತಮ್ಮ ಜಾಗದ ಬೇಲಿ ಹೊರಗೆ ಮತ್ತೊಂದು ಬೇಲಿ ಹಾಕುತ್ತೇವೆ ಎಂದು‌ಹೇಳಿದರು. ಆ ಭಾಗದ ಸದಸ್ಯ ಕುಶಲಪ್ಪರು ನಾನು ತೆಗೆಯಲು ಹೇಳಿದ್ದೇನೆ. ಪಂಚಾಯತ್ ಗೂ ತಿಳಿಸಿದ್ದೇನೆ ಎಂದು ಹೇಳಿದಾಗ, ಈ ಕುರಿತು ನೋಟೀಸ್ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಉದ್ದಂತಡ್ಕ, ಕೊಡೆಂಚಿಕಾರ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಸಿಮೆಂಟ್ ಗೋಣಿ ತೆಗೆಯದೇ ಆಗುತ್ತಿರುವ ಸಮಸ್ಯೆಯನ್ನು ಅಜಿತ್ ಉಲ್ಲೇಖಿಸಿದರು. ಈ ಕುರಿತು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇವೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಲಾಗುವುದು ಎಂದು ನೋಡೇಲ್ ಅಧಿಕಾರಿ ಸುಂದರಯ್ಯ ತಿಳಿಸಿದರು.

ಮಾರ್ಗ – ಕೇನಾಜೆ ರಸ್ತೆಯ ಮಧ್ಯೆ ಹೊಂಡ ಇರುವುದನ್ನು ಸರಿಪಡಿಸಿ, ರಸ್ತೆಯ ಬದಿಗಳ ಪೊದೆ ಕಡಿಯುವಂತೆ ರಾಮಚಂದ್ರ ಯಧುಗಿರಿ ಹೇಳಿದರು. ಹಾಗೂ ಚಿರತೆ ಹಾವಳಿ ಆಗುತ್ತಿದೆ. ಕ್ರಮಕೈಗೊಳ್ಳಿ ಎಂದು‌ ಅವರು ವಿನಂತಿಸಿದರು.
ಚಿರತೆ‌ ಹಾವಳಿ ಕುರಿತು ಅರಣ್ಯ ಇಲಾಖೆಗೆ ಬರೆಯುತ್ತೇವೆ ಎಂದು ಅಧ್ಯಕ್ಷರು ಹೇಳಿದರಲ್ಲದೆ, ಸ್ಥಳೀಯ ಯುವಕ ಸಂಘಗಳ ಮೂಲಕ ಶ್ರಮದಾನ ನಡೆಸಿ ರಸ್ತೆ ಬದಿಯ ಪೊದೆ ಸ್ವಚ್ಚಗೊಳಿಸುವ‌ ಕುರಿತು ಅಧ್ಯಕ್ಷರು ತಿಳಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ‌ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಕಚ್ಚುತ್ತಿದೆ. ಹಲವರು ಸಾಕು ಪ್ರಾಣಿಯನ್ನು ರಸ್ತೆಗೆ‌ಬಿಡುತ್ತಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಬಾಲಕೃಷ್ಣ ‌ಬೊಳುಗಲ್ಲು ಎಂಬವರು ಪ್ರಶ್ನಿಸಿದರು. ಸಾಕು ಪ್ರಾಣಿಗಳನ್ನು ರಸ್ತೆಯಲ್ಲಿ ಬಿಡಬಾರದೆಂದು ನಾವು ಹಲವು ಬಾರಿ ಸೂಚನೆ ನೀಡಿದ್ದರು.‌ ಜನರು ಅರ್ಥೈಸಿಕೊಳ್ಳುತ್ತಿಲ್ಲ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅಧ್ಯಕ್ಷರು ಹೇಳಿದರು.

ಶಿವಾಜಿನಗರದಲ್ಲಿ – ಮೈಲೆಟ್ಟಿಪಾರೆ ವ್ಯಾಪ್ತಿಯ ರಸ್ತೆ ಸಮಸ್ಯೆಯ‌ ಕುರಿತು ಗ್ರಾ.ಪಂ. ಮಾಜಿ ಸದಸ್ಯ ಮೋನಪ್ಪ ಪ್ರಸ್ತಾಪಿಸಿದರು.

ಪೇರಾಲು ಸಂಜೀವಿನಿ ಕಟ್ಟಡ ಕಾಮಗಾರಿ ಪ್ರಗತಿಯಾಗದ ಕುರಿತು ಸತ್ಯವತಿ ಸೊರಂಜ ಪ್ರಶ್ನಿಸಿದಾಗ, ಉದ್ಯೋಗ ಖಾತರಿಯಲ್ಲಿ ಹೆಚ್ಚಿನ ಅನುದಾನ ಅದಕ್ಕೆ ಇದೆ. ಮೆಟೀರಿಯಲ್ ಬಿಲ್ ಇನ್ನೂ ಬಂದಿಲ್ಲ. ಕಟ್ಟಡ ಆಗುತ್ತದೆ.‌ಸ್ವಲ್ಪ ತಡವಾಗಬಹುದು ಎಂದು ಅಧ್ಯಕ್ಷರು ಸ್ಪಷ್ಟನೆ ‌ನೀಡಿದರು.

ಮಂಡೆಕೋಲು ಮೀನು ಮಾರುಕಟ್ಟೆ ಏಲಂ ಬಳಿಕ ಕೆಲ ತಿಂಗಳು ಬಂದ್ ಆಗಿದೆ. ನಿಯಮದ ಪ್ರಕಾರ ಮರು ಏಲಂ ಮಾಡಬೇಕು ಎಂದು ಸಂಶೀರ್ ಶಾಲೆಕಾರ್ ಹೇಳಿದಾಗ, ಪ್ರಕಾಶ್‌ ಕಣೆಮಡ್ಕರು ಕೆಲವು ದಿನ ಮೀನು ಸಿಗದ‌ ಕಾರಣ ಬಂದ್ ಆಗಿರಬಹುದು. ನಾವು ಮೀನು ಮಾರಾಟ ಮಾಡುತ್ತಿದ್ದೇವೆ. ವಾಹನ ಮೂಲಕ ಗ್ರಾಮ ವ್ಯಾಪ್ತಿಯಲ್ಲಿ ಸಂಚಾರ ಆಗುತ್ತದೆ ಎಂದು ಹೇಳಿದರು.

ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯ ಕುರಿತು ಪ್ರಸ್ತಾಪಿಸಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ‌ಸುರೇಶ್ ಕಣೆಮರಡ್ಕರು ಇಲ್ಲಿ ಮೆಸ್ಕಾಂ ಸಿಬ್ಬಂದಿಯೂ ಇಲ್ಲ. ಇದ್ದವರು ವರ್ಗಾವಣೆ ಆಗಿದ್ದಾರೆ. ಹೊಸದಾಗಿ ಬಂದವರು ಇಲ್ಲಿ ವಿದ್ಯುತ್ ಕಂಬ ಎಲ್ಲಿದೆ ಎಂದು ತಿಳಿದುಕೊಳ್ಳಲು ‌ಕೆಲ ತಿಂಗಳು ಬೇಕಾಗುತ್ತದೆ. ಆದ್ದರಿಂದ ಸರಿಯಾದ ಸಿಬ್ಬಂದಿ ನೇಮಕ ಆಗಬೇಕು ಎಂದು ಒತ್ತಾಯಿಸಿದರು.

ಅಂಬ್ರೋಟಿ ಬಸ್ ಸ್ಟ್ಯಾಂಡ್ ಶಿಥಿಲಗೊಂಡಿರುವ ಕುರಿತು ಸುರೇಶ್ ಚೌಟಾಜೆ ಪ್ರಸ್ತಾಪಿಸಿದರು.

ಕೊನೆಯಲ್ಲಿ ‌ಮಾತನಾಡಿದ ಅಧ್ಯಕ್ಷರು ಗ್ರಾಮ ವ್ಯಾಪ್ತಿಯಲ್ಲಿ ಸಮಸ್ಯೆ ಇದ್ದರೆ ತಕ್ಷಣ ತಿಳಿಸಿ.‌ ಸಲಹೆಗಳಿದ್ದರೂ ನೀಡಿ ಎಂದು ಹೇಳಿದರು.