ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸುಳ್ಯದಲ್ಲಿ ಪ್ರತಿಭಟನೆ

0

ಕಿಕ್ಕಿರಿದ ಸಹಸ್ರಾರು ಪ್ರತಿಭಟನಾಕಾರರಿಂದ ಮುಗಿಲು ಮುಟ್ಟಿದ ಘೋಷಣೆ, ನ್ಯಾಯಕ್ಕಾಗಿ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಇಂದು ಸುಳ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು.


ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಪ್ರತಿಭಟನೆ ಮುರುಳ್ಯ ಗ್ರಾಮದ ನಿಂತಿಕಲ್ಲಿನಿಂದ ವಾಹನ ಜಾಥಾದ ಮೂಲಕ ಸುಳ್ಯ ನಗರಕ್ಕೆ ಬರುತ್ತಿದ್ದಂತೆ ಜ್ಯೋತಿ ವೃತ್ತದ ಬಳಿ ಸಹಸ್ರಾರು ಮಂದಿ ಪ್ರತಿಭಟನಾಕಾರರು ಸೇರಿ ಜಾಥಾದಲ್ಲಿ ಬಂದವರನ್ನು ಸ್ವಾಗತಿಸಿದರು.


ಜಾಥಾದಲ್ಲಿ ೫೦೦ಕ್ಕೂ ಹೆಚ್ಚು ವಾಹನಗಳು ಬಂದಿದ್ದು ವಾಹನಗಳು ನಗರಕ್ಕೆ ಪ್ರವೇಶಿಸಿದರೆ ಟ್ರಾಫಿಕ್ ಸಮಸ್ಯೆ ಉಂಟಾಗಬಹುದೆಂಬ ನಿಟ್ಟಿನಲ್ಲಿ ಬಂದಂತಹ ಎಲ್ಲಾ ವಾಹನಗಳನ್ನು ಪೊಲೀಸರು ಜ್ಯೋತಿ ವೃತ್ತದ ಬಳಿ ತಡೆದು ಬೀರಮಂಗಲ ಮತ್ತು ಜೂನಿಯರ್ ಕಾಲೇಜ್ ರಸ್ತೆಯ ಬದಿಗೆ ಅವುಗಳನ್ನು ಕಳುಹಿಸಿದರು.


ಹೋರಾಟದ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಬರುತ್ತಿದ್ದಂತೆ ತಿಮರೋಡಿ ಪರ ಜಯ ಘೋಷಣೆ ಮುಗಿಲು ಮುಟ್ಟಿತು. ಬಳಿಕ ಅವರನ್ನು ಕಾಲ್ನಡಿಗೆ ಮೂಲಕ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆಗೆ ಸಜ್ಜಾಗಿದ್ದ ವೇದಿಕೆಗೆ ಕರೆತರಲಾಯಿತು.
ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಮುಗಿಲು ಮುಟ್ಟುವ ಘೋಷಣೆಗಳನ್ನು ಕೂಗುತ್ತಾ, ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸುತ್ತಾ ಪ್ರತಿಭಟನಾಕಾರರು ಹೆಜ್ಜೆ ಇಟ್ಟರು.


ಮೆರವಣಿಗೆ ಜಾಥಾದಲ್ಲಿ ಬಳಸಲಾಗಿದ್ದ ಪ್ರಚಾರ ವಾಹನದಲ್ಲಿ ಸೌಜನ್ಯಳ ಹತ್ಯೆ ನಡೆದು ೧೧ ವರ್ಷವಾಗಿದೆ. ನಿರಪರಾಧಿಯನ್ನು ಅಪರಾಧಿ ಮಾಡಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯದ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಿದೆ. ಈ ಕೂಡಲೇ ಸೌಜನ್ಯ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕೆಂಬ ಆಗ್ರಹದ ಆಡಿಯೋವನ್ನು ಅಳವಡಿಸಲಾಗಿತ್ತು.


ಪ್ರತಿಭಟನಾ ಸಭೆಯ ವೇದಿಕೆಗೆ ಮುಖಂಡರು ಆಗಮಿಸುತ್ತಿದ್ದಂತೆ ಆ ಪರಿಸರಕ್ಕೆ ಸಾವಿರಾರು ಮಂದಿ ಹರಿದು ಬಂದು ಇಡೀ ಸುಳ್ಯ ನಗರ ಪರಿಸರವು ಜನಸ್ತೋಮದಿಂದ ಕಂಡುಬಂದಿತು.
ಪೊಲೀಸ್ ಇಲಾಖೆಯು ಕೂಡ ಸೂಕ್ತ ಬಂದೋಬಸ್ತ್ ಅನ್ನು ಏರ್ಪಡಿಸಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದ್ದರು.