ವಿನೋಬನಗರ: ಗಿರಿಜನ ಸಮಾಜ ಮಂದಿರದ ಬೀಗ ಮುರಿದ ಪ್ರಕರಣ

0

ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ – ಇಬ್ಬರು ವ್ಯಕ್ತಿಗಳನ್ನು ರಾತ್ರಿಯೇ ಠಾಣೆಗೆ ಕರೆದೊಯ್ದ ವಿಚಾರಿಸಿದ ಪೊಲೀಸರು

ರಾತ್ರಿ ವೇಳೆ ಗಿರಿಜನ ಸಮಾಜ ಮಂದಿರದ ಬೀಗ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾತ್ರಿಯೇ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಘಟನೆ ಆ.8ರಂದು ರಾತ್ರಿ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಸಂಭವಿಸಿದೆ.

ವಿನೋಬನಗರದ ಆದಿತ್ಯ ಎಂಟರ್ ಪ್ರೈಸಸ್ ಬಳಿ ಗಿರಿಜನ ಸಮಾಜ ಮಂದಿರವಿದ್ದು, ಇದರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿ ಹಾಗೂ ಇನ್ನೊಂದು ಖಾಲಿ ಕೊಠಡಿಯಿದೆ. ರಾತ್ರಿ 2 ಗಂಟೆ ಸುಮಾರಿಗೆ ಸುಳ್ಯ ಕಡೆಯಿಂದ ಬಂದ ಕೆ.ಎಲ್. ಕ್ರಮಾಂಕದ ಈಚರ್ ಲಾರಿಯೊಂದು ಬಂದು ಆದಿತ್ಯ ಎಂಟರ್ ಪ್ರೈಸಸ್ ಬಳಿ ರಸ್ತೆ ಬದಿ ನಿಂತಿತ್ತೆನ್ನಲಾಗಿದೆ. ಕೆಲ ಸಮಯದಲ್ಲಿ ಸಮೀಪದ ಮನೆಯ ಪ್ರಕಾಶ್ ಎಂಬವರು ರಾತ್ರಿ ಮೂತ್ರ ವಿಸರ್ಜನೆ ಮಾಡಲು ಮನೆಯಿಂದ ಹೊರ ಬಂದ ವೇಳೆಗೆ ಗಿರಿಜನ ಸಮಾಜ ಮಂದಿರದ ಬಳಿಯಿಂದ ಜೋರಾಗಿ ಶಬ್ದ ಬಂತೆನ್ನಲಾಗಿದೆ. ಶಬ್ದ ಬಂದ ವಿಚಾರವನ್ನು ಅವರು ಸಮೀಪದ ಮನೆಯ ಬೋಜಪ್ಪ ನಾಯ್ಕ ಅವರಿಗೆ ತಿಳಿಸಿದಾಗ , ಇಬ್ಬರು ವ್ಯಕ್ತಿಗಳು ಗಿರಿಜನ ಸಮಾಜ ಮಂದಿರದ ಕಡೆಯಿಂದ ನಡೆದುಕೊಂಡು ಬಂದು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹತ್ತಿ , ಲಾರಿಯನ್ನು ಮತ್ತೆ ಸುಳ್ಯ ಕಡೆಗೆ ತಿರುಗಿಸಿ ಹೋದರೆನ್ನಲಾಗಿದೆ. ಇದರಿಂದ ಅನುಮಾನಗೊಂಡ ಪ್ರಕಾಶ್ ಹಾಗೂ ಬೋಜಪ್ಪ ನಾಯ್ಕರು ಗಿರಿಜನ ಸಮಾಜ ಮಂದಿರದ ಬಳಿ ಹೋಗಿ ನೋಡಿದಾಗ ಬಾಗಿಲಿನ ಬೀಗ ಮುರಿದ ಸ್ಥಿತಿಯಲ್ಲಿತ್ತೆನ್ನಲಾಗಿದೆ. ತಕ್ಷಣ ಪ್ರಕಾಶ್ ಹಾಗೂ ಬೋಜಪ್ಪ ನಾಯ್ಕರ ಪುತ್ರ ಪ್ರಕಾಶ್ ಅವರ ಬೈಕ್ ನಲ್ಲಿ ಸುಳ್ಯ ಕಡೆಗೆ ಬಂದಾಗ ವಿನೋಬನಗರದಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದ್ವಾರದ ಬಳಿ ಅದೇ ಲಾರಿ ನಿಂತಿತ್ತೆನ್ನಲಾಗಿದೆ. ಕೂಡಲೇ ಬೋಜಪ್ಪ ನಾಯ್ಕರು ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಕೆಲ ಹೊತ್ತಿನಲ್ಲಿ ಪುತ್ತೂರು ಕಡೆಯಿಂದ ಒಂದು ಪೊಲೀಸ್ ವಾಹನ, ಅಜ್ಜಾವರ ಕಡೆಯಿಂದ ಒಂದು ಪೊಲೀಸ್ ಜೀಪು ಹಾಗೂ ಸುಳ್ಯದಿಂದ ಒಂದು ಪೊಲೀಸ್ ಜೀಪು ಅಲ್ಲಿಗೆ ಬಂದು ಲಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಲಾರಿಯನ್ನು ರಾತ್ರಿಯೇ ಸುಳ್ಯ ಪೊಲೀಸ್ ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದುಬಂದಿದೆ. ಬೋಜಪ್ಪ ನಾಯ್ಕರು ತಮ್ಮ ಅಂಗಡಿಯ ಬಳಿ ಸಿಸಿ ಕ್ಯಾಮರ ಅಳವಡಿಸಿದ್ದು, ಆ.9ರಂದು ಬೆಳಿಗ್ಗೆ ಪೊಲೀಸರು ವಿನೋಬನಗರಕ್ಕೆ ಬಂದು ಸಿಸಿ ಕ್ಯಾಮರ ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ.